ನವದೆಹಲಿ: ದೇಶದಲ್ಲಿ ವಂದೇ ಮಾತರಂ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ, ಇನ್ಮುಂದೆ ಕಾಂಗ್ರೆಸ್ ವಂದೇ ಮಾತರಂನ 2 ಚರಣಗಳನ್ನ ಮಾತ್ರ ಹಾಡಲು ನಿರ್ಧರಿಸಲಾಗಿದೆ. ಈ ಕುರಿತು ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ರಾಷ್ಟ್ರೀಯ ಗೀತೆಯ ಕುರಿತು ಕಾಂಗ್ರೆಸ್ನ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು ದಶಕಗಳಷ್ಟು ಹಳೆಯದಾದ ಸಿಡಬ್ಲ್ಯೂಸಿ ನಿರ್ಣಯವನ್ನು ಅನುಸರಿಸಲಿದೆ. ನಮ್ಮ ಪಕ್ಷದಲ್ಲಿ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ” ಎಂದು ಹೇಳಿದ್ದಾರೆ.
ವಂದೇ ಮಾತರಂ ಮತ್ತು ರಾಷ್ಟ್ರಗೀತೆಗಳು ಕಾಂಗ್ರೆಸ್ಗೆ ಭಾವನೆ ಮತ್ತು ಗೌರವದ ವಿಷಯಗಳಾಗಿವೆ. ಆದರೆ ಬಿಜೆಪಿ ಅವುಗಳನ್ನು ರಾಜಕೀಯ ವಿಷಯಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಕೆ.ಸಿ ವೇಣುಗೋಪಾಲ್ ಆರೋಪಿಸಿದರು. ಸಿಡಬ್ಲ್ಯೂಸಿ ಸಭೆಯ ವಿವರಗಳನ್ನು ಹಂಚಿಕೊಂಡ ಕೆಸಿ ವೇಣುಗೋಪಾಲ್, ʻಸಭೆಯಲ್ಲಿ ಕಾಂಗ್ರೆಸ್ನ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗಿದೆ, ಇತ್ತೀಚಿನ ವಿದ್ಯಾರ್ಥಿ ಚಳವಳಿಗಳು ಮತ್ತು ಸರ್ಕಾರದ ಪ್ರತಿಕ್ರಿಯೆಯ ಕುರಿತು ಸಮಿತಿಯು ಚರ್ಚಿಸಿದೆ ಎಂದು ಹೇಳಿದರು. ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿರೋಧ ಪಕ್ಷವು ಸಂಸತ್ತಿನಲ್ಲಿ ಸರ್ಕಾರವನ್ನು ಯಶಸ್ವಿಯಾಗಿ ತರಾಟೆಗೆ ತೆಗೆದುಕೊಂಡಿದೆ, ವಿದ್ಯಾರ್ಥಿಗಳ ಕಳವಳಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಒತ್ತಡವನ್ನು ಹೇರಿದೆ. ಜೊತೆಗೆ ರಾಮಮಂದಿರಕ್ಕೆ ಸಂಬಂಧಿಸಿದ ಚಂದಾ ಚೋರಿ (ದೇಣಿಗೆ ಕಳ್ಳತನ) ಆರೋಪದ ಕುರಿತೂ ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕೆ.ಸಿ ವೇಣುಗೋಪಾಲ್ ಹೇಳಿದರು.

ಇತ್ತೀಚೆಗೆ ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅವಮಾನ ಮಾಡಿದ್ದರು ಎಂಬ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸೋನಿಯಾ ವಿರುದ್ಧ ದೆಹಲಿ ಮತ್ತು ಕರ್ನಾಟಕದಲ್ಲಿ ದೂರುಗಳು ದಾಖಲಾಗಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ವಂದೇ ಮಾತರಂ ಕುರಿತು ನಿರ್ಣಯ ಅಂಗೀಕರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಸೋನಿಯಾರ ನಡೆಯನ್ನ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ 1937ರ ಸಿಡಬ್ಲ್ಯೂಸಿ ಸಭೆಯಲ್ಲಿ ನಿರ್ಧಿರಿಸಿದಂತೆ ರಾಷ್ಟ್ರೀಯ ಸಮಾವೇಶದಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಹಾಡುತ್ತೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.