Search


KPCC ಕಛೇರಿಯಲ್ಲೇ ಕೈ-ಕೈ ಮಿಲಾಯಿಸಿದ "ಕೈ" ನಾಯಕರು

ಬೆಂಗಳೂರು : KPCC ಕಛೇರಿಯಲ್ಲೇ ಕರ್ನಾಟಕ ಯುವ ಕಾಂಗ್ರೇಸ್‌ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳಿಗೆ ಕೊಕ್ ಕೊಟ್ಟ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಎರಡು ಗುಂಪುಗಳ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.ಇದರ ಮಧ್ಯೆ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂದ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲು ಕೆಪಿಸಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದು ಕೊನೆಗೆ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಘಟನೆಗೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವುದೇ ಪ್ರಮುಖ ಕಾರಣ ಎಂದು ತಿಳಿದು ಬಂದಿದ್ದು. ಈ ಕುರಿತು ಪ್ರತಿಕ್ರಿಯೆ ನೀಡಿರುವ ದೀಪಿಕಾ ರೆಡ್ಡಿ"ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು" ಎಂದು ಅಧ್ಯಕ್ಷ ಎಚ್.ಎಸ್.ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವೈಯಕ್ತಿಕ ಸೇಡು ಮತ್ತು ಸ್ತ್ರೀ ದ್ವೇಷ ; ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ದೀಪಿಕಾ ರೆಡ್ಡಿ...!

ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಲಾಟೆ ಬಳಿಕ ದೀಪಿಕಾ ರೆಡ್ಡಿ ಅವರು ಪ್ರೆಸ್‌ನೋಟ್ ರಿಲೀಸ್ ಮಾಡಿದ್ದು, ಹುದ್ದೆ ತಡೆಹಿಡಿದಿದ್ದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮ. ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು. ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯಕ್ಕೆ ಮೌನವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ಮೇಲಿನ ನಿಷ್ಠೆ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ 2.95 ಲಕ್ಷ ಮತಗಳ ಪಡೆದಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನು ಒಬ್ಬಳು. ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಅವರ ವಿರುದ್ಧ ಹೋರಾಟ ನಡೆಸಿದ್ದೇನೆ.

ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಎಚ್.ಎಸ್. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ. ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗ್ತಿದೆ. ಚುನಾವಣೆಯ ಬಳಿಕ ರಾಜಕೀಯ ಪಿತೂರಿ ಮತ್ತು ಮಾನಸಿಕ ಕಿರುಕುಳ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕ ಬೆಂಬಲ ಹೊಂದಿರುವ ಮಹಿಳಾ ನಾಯಕರನ್ನು ಬೆದರಿಸಲು ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಈ ಕ್ರಮಗಳು ನನ್ನನ್ನು ಬೆದರಿಸಲಾರವು. ಜನಾದೇಶವನ್ನು ಯಾವುದೇ ಆದೇಶ ಅಳಿಸಲಾರದು. ಈ ವಿಚಾರವನ್ನ ರಾಷ್ಟ್ರೀಯ ನಾಯಕರ ಮುಂದೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. 

ನನಗೆ 8 ಜಿಲ್ಲೆಗಳನ್ನ ಕೊಟ್ಟಿದ್ದಾರೆ. ಹೆದರದೆ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸದ ಬಗ್ಗೆ ದಾಖಲೆ ಇದೆ. ರಾಹುಲ್ ಗಾಂಧಿ ಹೇಳಿದ ಹಾಗೆ ಚುನಾವಣೆಯಲ್ಲಿ‌ ಕೆಲಸ ಮಾಡಿದ್ದೇವೆ. ನನ್ನ ಬಿಟ್ಟು ಎಲ್ಲಾ ಪದಾಧಿಕಾರಿಗಳಿಗೆ ತೊಂದರೆ ಕೊಟ್ರು. ಹೊಡೆದು ಆಳುವ ನೀತಿಯನ್ನ ಮಂಜುನಾಥ್ ಮಾಡಿದ್ದಾರೆ. ಸಭೆಯಿಂದ ನಮ್ಮ‌ ಪದಾಧಿಕಾರಿ ಎದ್ದು ಹೊರಡಲು ಪ್ರಯತ್ನ ಮಾಡಿದ್ರು. ಎಲ್ಲರನ್ನೂ ಜೊತೆ ತೆಗೆದುಕೊಂಡು ಹೋಗುವುದು ರಾಹುಲ್ ಗಾಂಧಿ ಐಡಿಯಾಲಜಿ. ನಮ್ಮ ಸಮಸ್ಯೆಯನ್ನ ಡಿಸಿಎಂ, ಸಿಎಂ ಕರೆಸಿ ಬಗೆಹರಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

By News Desk - 18-05-2026


Ads in Post