Search


ʻಆಪರೇಷನ್‌ ಸಿಂಧೂರ್‌ʼ; ರಾಜನಾಥ್‌ ಸಿಂಗ್‌ ವಿರುದ್ದ ಕಾಂಗ್ರೆಸ್‌ ಗಂಭೀರ ಆರೋಪ..!

ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅನುಮತಿ ಕೋರಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ  ಕೆ.ಸಿ. ವೇಣುಗೋಪಾಲ್ ಈ ಕುರಿತು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ (Speaker Om Birla) ಅವರಿಗೆ ಪತ್ರ ಬರೆದಿದ್ದು,  ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಂಸತ್‌ನ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರು  ಸಂಸತ್ತಿನಲ್ಲಿ ಆಪರೇಷನ್‌ ಸಿಂಧೂರ್‌ (Operation Sindoor) ಕಾರ್ಯಚರಣೆ ವೇಳೆ ಹುತಾತ್ಮರಾದ 6 ಸೈನಿಕರ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಇದರ ಬಗ್ಗೆ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ಈ ಕುರಿತು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ವೇಣುಗೋಪಾಲ್, “ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಜನತೆಗೆ ಸುಳ್ಳು ಹೇಳಿದ್ದಾರೆ.

ಸದನವನ್ನು ದಾರಿ ತಪ್ಪಿಸಲು ಅವರು ಜುಲೈ 2025ರಲ್ಲಿ ಯಾವುದೇ ಭಾರತೀಯ ಸೈನಿಕ ಹುತಾತ್ಮರಾಗಿಲ್ಲ ಎಂದು ಹೇಳಿದ್ದರು. ಅದಾದ ಒಂದು ವರ್ಷದ ನಂತರ ಸಶಸ್ತ್ರ ಪಡೆಗಳು ತಾವು 6 ಜನ ಸೈನಿಕರನ್ನು ಕಳೆದುಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿವೆ. ರಕ್ಷಣಾ ಸಚಿವರು ನಮ್ಮ ಸೈನಿಕರ ಬಲಿದಾನವನ್ನು ಈ ರೀತಿ ಹೇಗೆ ಮುಚ್ಚಿಡಲು ಸಾಧ್ಯ?” ಎಂದು ಕಿಡಿಕಾರಿದ್ದಾರೆ.

“ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಈ 6 ವೀರ ಯೋಧರ ಶೌರ್ಯ ಮತ್ತು ಬಲಿದಾನದ ಬಗ್ಗೆ ಭಾರತದ ಜನತೆಗೆ ಮಾಹಿತಿ ನೀಡದಿರುವುದು ಆ ಹುತಾತ್ಮರ ಕುಟುಂಬಗಳಿಗೆ ಮತ್ತು ಇಡೀ ಸಶಸ್ತ್ರ ಪಡೆಗಳಿಗೆ ಮಾಡಿದ ಘೋರ ಅವಮಾನವಾಗಿದೆ, “ನಮ್ಮ ಶತ್ರುಗಳ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸುವಾಗ ಅವರು ವೀರಮರಣ ಅಪ್ಪಿದ್ದಾರೆ. ಆದರೆ, ಈ ಸ್ವಯಂ ಘೋಷಿತ ರಾಷ್ಟ್ರೀಯತಾವಾದಿ ಸರ್ಕಾರವು ಅವರ ಬಲಿದಾನದ ಬಗ್ಗೆ ಬಹಳ ಸುಲಭವಾಗಿ ಸುಳ್ಳು ಹೇಳಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

“ಯಾವುದೇ ಸಚಿವರು ಸದನವನ್ನು ದಾರಿ ತಪ್ಪಿಸಿದರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟರೆ, ಅದು ಹಕ್ಕುಚ್ಯುತಿಯಾಗುತ್ತದೆ ಮತ್ತು ಸದನದ ನಿಂದನೆಗೆ ಸಮಾನವಾಗಿರುತ್ತದೆ ಎಂಬುದು ಸ್ಥಾಪಿತ ನಿಯಮವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಕೋರಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

By Ravikumar - 01-07-2026


Ads in Post