Search


ಹಿಂದೂಗಳ ತೇಜೋವಧೆ ಮಾಡಲು ಸಂಚು; ಅಯೋಧ್ಯೆ ಕಳ್ಳತನದ ಬಗ್ಗೆ RSS ಪ್ರತಿಕ್ರಿಯೆ

ನವದೆಹಲಿ: ರಾಮ ಮಂದಿರದಲ್ಲಿ (Ram Mandir) ನಡೆದಿರುವ ದೇಣಿಗೆ ಅಕ್ರಮದ ಬಗ್ಗೆ ಮೊದಲ ಬಾರಿಗೆ ಆರ್‌ಎಸ್‌ಎಸ್‌ ಪ್ರತಿಕ್ರಿಯೆ ನೀಡಿದೆ. ʻ ರಾಮ ಮಂದಿರದ ಹುಂಡಿ ಹಣ ಕಳ್ಳತನ ದುರದೃಷ್ಟಕರ ಘಟನೆ, ಇದರ ಸುತ್ತ ಸೃಷ್ಟಿಯಾಗಿರುವ ಗೊಂದಲ ಮತ್ತು ಅನಿಶ್ಚಿತತತೆಗಳು ತಕ್ಷಣವೇ ಕೊನೆಗೊಳ್ಳಬೇಕು ಎಂದು ಆರ್‌ಎಸ್ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale)ಅವರು ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರದ ಹುಂಡಿ ಹಣ ಎಣಿಕೆಯಲ್ಲಿ ಭಾರಿ ಲೋಪ ಕಂಡು ಬಂದ ಹಿನ್ನಲೇ ದೇಶಾದ್ಯಂತ ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ಪ್ರಥಮ ಬಾರಿಗೆ ಆರ್‌ಎಸ್‌ಎಸ್‌ (RSS) ಪ್ರತಿಕ್ರಿಯೆ ನೀಡಿದೆ. ʻದೇಣಿಗೆಗಳಿಂದ ಹಣ ಕಳುವಾಗಿರುವ ಘಟನೆಯು ಕೋಟ್ಯಂತರ ರಾಮಭಕ್ತರ ಶ್ರದ್ಧೆ ಹಾಗೂ ನಂಬಿಕೆಗೆ ನೋವಾಗಿದೆ. ಈ ಘಟನೆಯಿಂದ ನಾವೆಲ್ಲರೂ ತೀವ್ರವಾಗಿ ನೊಂದಿದ್ದೇವೆ. ಮಂದಿರದ ಆಡಳಿತ ಮಂಡಳಿ ಹಾಗೂ ಎಸ್‌ಐಟಿ ತನಿಖಾ ತಂಡವು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಸದ್ಯ ಮೂಡಿರುವ ಗೊಂದಲ ಮತ್ತು ಅನಿಶ್ಚಿತತೆಗೆ ಆಡಳಿತ ಮಂಡಳಿ ಶೀಘ್ರವಾಗಿ ತೆರೆ ಎಳೆಯಬೇಕು ಎಂದು ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ.

ಹಿಂದೂ ಸಮಾಜದ ತೇಜೋವಧೆ ಮಾಡಲು ಸಂಚು..!

ಈ ಕಠಿಣ ಸಮಯದಲ್ಲಿ ಇಡೀ ಹಿಂದೂ ಸಮಾಜವು ಅಗತ್ಯ ಸಂಯಮ ಮತ್ತು ತಾಳ್ಮೆಯನ್ನು ಪ್ರದರ್ಶಿಸಬೇಕು. ಈ ದುರದೃಷ್ಟಕರ ಘಟನೆಯನ್ನು ದುರುಪಯೋಗಪಡಿಸಿಕೊಂಡು ಹಿಂದೂ ಧರ್ಮ ಮತ್ತು ಸಮಾಜವನ್ನು ಜಗತ್ತಿನ ಮುಂದೆ ತೇಜೋವಧೆ ಮಾಡಲು ಹೊಂಚು ಹಾಕುತ್ತಿರುವ ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಶಕ್ತಿಗಳ ಸಂಚನ್ನು ಭಕ್ತರು ವಿಫಲಗೊಳಿಸಬೇಕು ಎಂದು ಹೊಸಬಾಳೆ ಅವರು ಮನವಿ ಮಾಡಿದ್ದಾರೆ. 

ದೇವಸ್ಥಾನದಲ್ಲಿ ದೋಷರಹಿತ, ಪಾರದರ್ಶಕ ಹಣಕಾಸು ನಿರ್ವಹಣೆ ಮತ್ತು ಧಾರ್ಮಿಕ ಪವಿತ್ರತೆಯ ವಾತಾವರಣವನ್ನು ಕಾಪಾಡಿಕೊಳ್ಳುವ ಮೂಲಕ ಭಕ್ತರ ನಂಬಿಕೆಯನ್ನು ಟ್ರಸ್ಟ್‌ ಮತ್ತಷ್ಟು ಗಟ್ಟಿಗೊಳಿಸಬೇಕು, ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವ್ಯವಸ್ಥಿತವಾಗಿ ಕಳವು ಮಾಡಲಾಗಿದೆ ಎಂಬ ಗಂಭೀರ ದೂರು ಕೇಳಿಬಂದಿತ್ತು. ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

By Ravikumar - 03-07-2026


Ads in Post