ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ರಾಜ್ಯದ ಅಧಿಕಾರಿಗಳು ಪ್ರಬಲವಾಗಿ ವಾದ ಮಂಡಿಸಿದರೂ, ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮಹತ್ವದ ಸೂಚನೆ ನೀಡಿದೆ. ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪ್ರಾಧಿಕಾರ ಎತ್ತಿಹಿಡಿದಿದೆ. CWMA ಅಧ್ಯಕ್ಷ ಎಸ್.ಕೆ. ಹಲ್ದಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರ ಪ್ರಕಟವಾಗಿದೆ.
ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ವರ್ಚ್ಯುಯಲ್ ಮೂಲಕ ಭಾಗವಹಿಸಿದ್ದರು. ಕರ್ನಾಟಕದ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಕೂಡ ಆನ್‌ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ರಾಜ್ಯದ ವಾದವನ್ನು ಮಂಡಿಸಿದರು. ಆದಾಗ್ಯೂ, ಕರ್ನಾಟಕದ ಆಕ್ಷೇಪಣೆ ಮತ್ತು ವಾದಗಳಿಗೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ಮುಂದುವರಿಸಲಾಗಿದೆ. ಈ ನಿರ್ಧಾರ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.