ಮಂಗಳೂರು: ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಬೆಂಗಳೂರಿನ ಹೊರಗೆ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 40 ವಿಷಯಗಳ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ಕರಾವಳಿಯ ಜನರ ಭಾವನೆಗಳನ್ನು ಗೌರವಿಸುವುದಾಗಿ ಹೇಳಿದರು. ಮಂಗಳೂರು ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಜಿಲ್ಲೆಯಾಗಿದ್ದು, ಕರಾವಳಿ ಭಾಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಒಟ್ಟು ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ತಲಾ ಸುಮಾರು ₹16 ಸಾವಿರ ಕೋಟಿ ಮೀಸಲಿಡಲಾಗಿದ್ದು, ರಸ್ತೆ ಅಭಿವೃದ್ಧಿಗೆ ಮಾತ್ರ ₹14 ಸಾವಿರ ಕೋಟಿ ಅನುದಾನ ಒದಗಿಸುವ ಯೋಜನೆ ಇದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಿಸುವ ಪ್ರಸ್ತಾಪವನ್ನೂ ಸಂಪುಟ ಸಭೆಯಲ್ಲಿ ಪರಿಗಣಿಸಲಾಗಿದೆ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಒಂದು ತಿಂಗಳ ಕಾಲ ಕರಡು ಅಧಿಸೂಚನೆ ಹೊರಡಿಸಲಾಗುತ್ತದೆ. ಅಭಿಪ್ರಾಯ ಸಂಗ್ರಹದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ಮೀನುಗಾರಿಕೆ, ಸಾಗರ ಅಧ್ಯಯನ ಮತ್ತು ಬ್ಲೂ ಎಕಾನಮಿಗೆ ಒತ್ತು ನೀಡಲು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯೂ ಇದೆ. ಮಂಗಳೂರಿನಲ್ಲಿ ಕಿದ್ವಾಯಿ ಹಾಗೂ ಜಯದೇವ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸುವುದಾಗಿ ಸರ್ಕಾರ ತಿಳಿಸಿದೆ.
ಕರಾವಳಿ ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಲೈಟ್ಹೌಸ್ ಪ್ರವಾಸೋದ್ಯಮಕ್ಕೆ ₹60.34 ಕೋಟಿ, ಉಡುಪಿ ಮಲ್ಪೆ ಪ್ರದೇಶದ ಪಿಪಿಪಿ ಯೋಜನೆಗೆ ₹179 ಕೋಟಿ ಹಾಗೂ ಪುತ್ತೂರು ಮೆಡಿಕಲ್ ಕಾಲೇಜಿಗೆ ₹425 ಕೋಟಿ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ. ಮರವೂರು ಸೇತುವೆ ಕಾಮಗಾರಿಗೆ ₹40 ಕೋಟಿ ಮತ್ತು ಕಟೀಲು ರಸ್ತೆ ಅಭಿವೃದ್ಧಿಗೆ ₹33 ಕೋಟಿ ಮೀಸಲಿಡಲಾಗಿದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೂ ಅನುದಾನ ನೀಡಲಾಗಿದೆ. ದೇವಾಲಯಗಳ ಅಭಿವೃದ್ಧಿಗೆ ₹12 ಕೋಟಿ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹5 ಕೋಟಿ ಸೇರಿದಂತೆ ವಿವಿಧ ಮಠ, ದೇವಸ್ಥಾನ, ದೈವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಘೋಷಿಸಲಾಗಿದೆ. ಕಂಬಳಕ್ಕೆ ನೀಡುತ್ತಿದ್ದ ಅನುದಾನವನ್ನು ₹40 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ.
ಮೀನುಗಾರಿಕೆ ಕ್ಷೇತ್ರಕ್ಕೆ ಕೈಗಾರಿಕಾ ಸ್ಪರ್ಶ ನೀಡುವ ಉದ್ದೇಶದಿಂದ ಮುಲ್ಕಿಯಲ್ಲಿ 150 ಎಕರೆ ಪ್ರದೇಶದಲ್ಲಿ ಬೃಹತ್ ಫಿಶರೀಸ್ ಪಾರ್ಕ್ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮುಲ್ಕಿ ತಾಲ್ಲೂಕಿನ ಕೊಲ್ಲೂರು, ಬಳ್ಳುಂಜೆ ಹಾಗೂ ಉಳಿಪಾಡಿ ಗ್ರಾಮಗಳಲ್ಲಿರುವ 316.79 ಎಕರೆ ಜಮೀನಿನ ಪೈಕಿ 150 ಎಕರೆ ಇದಕ್ಕಾಗಿ ಬಳಸಲಾಗುತ್ತದೆ. ಕೆರೆಬೆಟ್ಟು ಮತ್ತು ಶಿವಪುರ ಗ್ರಾಮಗಳಲ್ಲಿನ 113.89 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಪಡಿಸಿ ಡೇಟಾ ಸೆಂಟರ್ಗಳು, ಉತ್ಪಾದನಾ ಘಟಕಗಳು ಹಾಗೂ ಹೊಸ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.