Search


SC-ST ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೊಡ್ತಿಲ್ಲ; ಕೇಂದ್ರ ಸಚಿವರ ಆರೋಪ, ಸ್ಪೀಕರ್ ಗೆ ಪತ್ರ

ನವದೆಹಲಿ: ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳ ಮೇಲಿನ ಚರ್ಚೆ ವೇಳೆ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಕ್ಕೆ ಸೇರಿದ ಸಂಸದರಿಗೆ ಮಾತನಾಡಲು ಅಗತ್ಯವಾದಷ್ಟು ಸಮಯ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ಕೇಂದ್ರ ಸಚಿವ ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ಪಕ್ಷದ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಗಮನಕ್ಕೆ ತಂದಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಆಗಸ್ಟ್ 5ರಂದು ತಮ್ಮ ನಿವಾಸದಲ್ಲಿ ನಡೆದ ಎನ್ಡಿಎ ಸಂಸದರ ಸಭೆಯಲ್ಲಿ ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್ ಈ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು ಎಂದು ಮಾಂಝಿ ಅವರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮಧ್ಯಪ್ರದೇಶದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಖರ್ಗೋನ್‌ನ ಸಂಸದರಾಗಿರುವ ಪಟೇಲ್, ಪ್ರಮುಖ ಮಸೂದೆಗಳ ಚರ್ಚೆಯ ಸಂದರ್ಭದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಸಂಸದರಿಗೆ ಮಾತನಾಡಲು ಸಾಕಷ್ಟು ಅವಕಾಶ ದೊರೆಯುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಂಝಿ ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.

ಎನ್ಡಿಎ ಸಂಸದರ ಗುಂಪುಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ತಮ್ಮ ಸಮಸ್ಯೆಗಳು ಹಾಗೂ ಸಲಹೆಗಳನ್ನು ಚರ್ಚಿಸುತ್ತವೆ ಎಂದು ಮಾಂಝಿ ಹೇಳಿದ್ದಾರೆ. ಆಗಸ್ಟ್ 5ರ ಸಭೆ ಕೇವಲ ಎಸ್ಸಿ ಮತ್ತು ಎಸ್ಟಿ ಸಂಸದರಿಗೆ ಸೀಮಿತವಾಗಿರಲಿಲ್ಲ. ಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಹಲವು ಎಸ್ಸಿ ಮತ್ತು ಎಸ್ಟಿ ಸಂಸದರ ಪರವಾಗಿ ಪಟೇಲ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು ಎಂದು ಮಾಂಝಿ ತಿಳಿಸಿದ್ದಾರೆ. “ಸಂಸತ್ತಿನಲ್ಲಿ ಮಾತನಾಡುವ ಹಕ್ಕು ಎಲ್ಲ ಸಂಸದರಿಗೆ ಸಮಾನವಾಗಿರಬೇಕು” ಎಂಬುದನ್ನು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಒತ್ತಿಹೇಳಿರುವುದಾಗಿ ಅವರು ಹೇಳಿದ್ದಾರೆ.

ಈ ಕುರಿತು ದಿ ಹಿಂದೂಗೆ ಪ್ರತಿಕ್ರಿಯಿಸಿರುವ ಪಟೇಲ್, ಇದು ತಮ್ಮೊಬ್ಬರ ವೈಯಕ್ತಿಕ ಅಭಿಪ್ರಾಯವಲ್ಲ, ಸಭೆಯಲ್ಲಿ ಭಾಗವಹಿಸಿದ್ದ ಹಲವು ಸಂಸದರು ವ್ಯಕ್ತಪಡಿಸಿದ ಕಳವಳ ಎಂದು ಸ್ಪಷ್ಟಪಡಿಸಿದ್ದಾರೆ. “ಕೆಲವೊಮ್ಮೆ ಮಾತನಾಡಲು ಅವಕಾಶ ಸಿಗುತ್ತದೆ, ಕೆಲವೊಮ್ಮೆ ಸಿಗುವುದಿಲ್ಲ. ಎಲ್ಲ ಸಂಸದರೂ ಸದನದಲ್ಲಿ ಹೆಚ್ಚಿನ ಸಮಯ ಮಾತನಾಡಲು ಬಯಸುತ್ತಾರೆ” ಎಂದು ಅವರು ಹೇಳಿದ್ದಾರೆ.

By Ravikumar - 26-09-2026


Ads in Post