ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಹಲವೆಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ಗುಪ್ತಚಾರ ಸಂಸ್ಥೆ (ISI) ಮತ್ತು ಮೋಸ್ಟ್ ವಾಟೆಂಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಹೊಂದಿದ್ದ 9 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 9 ಜನ ಶಂಕಿತ ಉಗ್ರರನ್ನ ಬಂದಿಸಿದ್ದು. ಬಂದಿತರ ಪೈಕಿ ಪಂಜಾಬ್ ಮತ್ತು ನೇಪಾಳಿ ಮೂಲದ ವಿದೇಶಿಗರು ಇದ್ದಾರೆ. ಈ ಗುಂಪು ಗಡಿಯುದ್ದಕ್ಕೂ ಇರುವ ಪಾಕಿಸ್ತಾನದ ಹ್ಯಾಂಡ್ಲರ್ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಾ ದೇಶದಲ್ಲಿ ಭೀತಿ ಸೃಷ್ಟಿಸಲು ಮತ್ತು ಭದ್ರತೆಯನ್ನು ಅಡ್ಡಿ ಪಡಿಸಲು ಗುರಿಯಿಟ್ಟು ದಾಳಿ ನಡೆಸುವ ಕಾರ್ಯವನ್ನು ನಡೆಸುತ್ತಿತ್ತು.
ಪರಮಾಣು ಸೌಲಭ್ಯಗಳೇ ಉಗ್ರರ ಟಾರ್ಗೆಟ್!
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಪಾಕಿಸ್ತಾನ ಬೆಂಬಲಿತ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಅವರಿಂದ ಸಂಭಾವ್ಯ ಗುರಿಗಳ ಕುರಿತು ಸೂಚನೆಗಳನ್ನು ಪಡೆಯುತ್ತಾ ದೇಶದ ಪ್ರಮುಖ ಸ್ಥಳಗಳು, ಸ್ಥಾಪನೆಗಳು ಮತ್ತು ಭದ್ರತಾ ಪಡೆಗಳ ಸದಸ್ಯರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು, ಈ ಶಂಕಿತ ಟಾರ್ಗೆಟ್ಗಳ ಪೈಕಿ ವಿದ್ಯುತ್ ಸ್ಥಾವರಗಳು, ಪರಮಾಣು ಸೌಲಭ್ಯಗಳು, ವಿದ್ಯುತ್ ಕೇಂದ್ರಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳು ಹಾಗೂ ಜನದಟ್ಟಣೆಯ ಸಾರ್ವಜನಿಕ ಸ್ಥಳಗಳು ಮುಂತಾದ ಪ್ರಮುಖ ಮೂಲಸೌಕರ್ಯಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಬಳಿ ಗ್ರೇನೇಡ್!
ಇನ್ನು ಬಂಧಿತ ಉಗ್ರರ ಬಳಿ ಗ್ರೆನೇಡ್ಗಳು, ಸ್ಫೋಟಕ ವಸ್ತುಗಳು ಮತ್ತು ಹಲವಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಸದ್ಯ ಜಾಲದ ಪೂರ್ಣ ವ್ಯಾಪ್ತಿಯನ್ನು ಪತ್ತೆ ಹಚ್ಚಲು ಶಂಕಿತರ ಸಂವಹನ ದಾಖಲೆಗಳು, ಹಣಕಾಸಿನ ವಹಿವಾಟುಗಳು ಮತ್ತು ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.