ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ಭಾರೀ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವಾಗಿದ್ದು, ಅದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಜೆಐ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ನ ಕೇರಳ ಘಟಕ ಆಕ್ರೋಶ ವ್ಯಕ್ತಪಡಿಸಿತ್ತು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, “ಡಿಯರ್ ಸೂರ್ಯಕಾಂತ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ಮತ್ತೊಬ್ಬರನ್ನು ನಾವು ಹುಡುಕಿಕೊಳ್ಳುತ್ತೇವೆ” ಎಂದು ಪೋಸ್ಟ್ ಮಾಡಿತ್ತು. ಈ ಹೇಳಿಕೆಗೆ ವಕೀಲರ ಸಮುದಾಯ ಹಾಗೂ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ವಿವಾದಾತ್ಮಕ ಪೋಸ್ಟ್ ಅನ್ನು ಅಳಿಸಿಹಾಕಿದೆ.
ಪಕ್ಷದ ನಾಯಕರ ಅನುಮತಿ ಅಥವಾ ಗಮನಕ್ಕೆ ಬಾರದೆ ಈ ಪೋಸ್ಟ್ ಪ್ರಕಟಿಸಲಾಗಿದೆ ಎಂದು ಕೇರಳ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಅಲ್ಲದೆ, ಪೋಸ್ಟ್ ಪ್ರಕಟಿಸಲು ಕಾರಣರಾದ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಿರುವುದಾಗಿ ತಿಳಿಸಿದೆ. ವಿರೋಧ ಪಕ್ಷದ ನಾಯಕರ ಭೇಟಿಗೆ ಸಿಜೆಐ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿರುವುದರಿಂದ ಭೇಟಿ ಸಾಧ್ಯವಿಲ್ಲ ಎಂದು ಸಿಜೆಐ ತಿಳಿಸಿದ್ದರು. ಇಂತಹ ಸಭೆಗಳು ಸಂವಿಧಾನದ ಅಧಿಕಾರ ಪ್ರತ್ಯೇಕತೆಯ ತತ್ವಕ್ಕೆ ವಿರುದ್ಧವಾಗುತ್ತವೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್ನ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಖಂಡಿಸಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, ಕಾಂಗ್ರೆಸ್ನ ಮುಂದಿನ ಗುರಿ ನ್ಯಾಯಾಂಗ ವ್ಯವಸ್ಥೆ ಎಂದು ಆರೋಪಿಸಿದ್ದಾರೆ. ಭಾರತದ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದ ಅವರು, ದೇಶಭಕ್ತ ಭಾರತೀಯರು ಇಂತಹ ಪ್ರಯತ್ನಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಸುಪ್ರೀಂ ಕೋರ್ಟ್ ಅಡ್ವಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (SCAORA) ಕೂಡ ಸಿಜೆಐ ರಾಜೀನಾಮೆಗೆ ಆಗ್ರಹಿಸಿ ಪ್ರಕಟಿಸಲಾದ ಪೋಸ್ಟ್ಗಳನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ. ನ್ಯಾಯಾಂಗವು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದರ ಕಾರ್ಯವೈಖರಿ ಕುರಿತು ಯಾವುದೇ ಆಕ್ಷೇಪಣೆಗಳಿದ್ದರೂ ಕಾನೂನುಬದ್ಧ ಮಾರ್ಗಗಳ ಮೂಲಕವೇ ವ್ಯಕ್ತಪಡಿಸಬೇಕು ಎಂದು ಸಂಘಟನೆ ತಿಳಿಸಿದೆ. ನ್ಯಾಯಾಂಗದ ಮುಖ್ಯಸ್ಥರ ವಿರುದ್ಧ ಇಂತಹ ಹೇಳಿಕೆಗಳು ಸಂಸ್ಥೆಯ ಘನತೆ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಬಹುದು ಎಂದು ಎಚ್ಚರಿಸಿರುವ ಸಂಘಟನೆ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸುವಂತೆ ಕರೆ ನೀಡಿದೆ.