ಹೈದರಾಬಾದ್: ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಕುರಿತು ದೇಶಾದ್ಯಂತ ಚರ್ಚೆ ಹಾಗೂ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಬಳಿಕ, ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡದೆ ಹಾಗೂ ತನ್ನ ವಾದ ಮಂಡಿಸಲು ಅವಕಾಶ ಕಲ್ಪಿಸದೆ ಆ ಹೆಸರನ್ನು ಅಳಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.
NALSAR ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ 19ನೇ NALSAR ನ್ಯಾಯಮೂರ್ತಿ ಬಿ.ಆರ್. ಸಾಹ್ನಿ ಸ್ಮಾರಕ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಭುಯಾನ್, ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಯಾವುದೇ ಪ್ರಕ್ರಿಯೆ ನಿರಂಕುಶವಾಗುತ್ತದೆ ಎಂದು ಹೇಳಿದರು. ಇಂತಹ ಕ್ರಮಗಳು ಸಂವಿಧಾನದ 326ನೇ ವಿಧಿ ಹಾಗೂ 14ನೇ ವಿಧಿಯ ಆಶಯಕ್ಕೆ ವಿರುದ್ಧವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮತದಾನದ ಹಕ್ಕುಳ್ಳವರು ಮತ್ತು ಹಕ್ಕಿಲ್ಲದವರು ಎಂಬ ಎರಡು ವರ್ಗಗಳಾಗಿ ಭಾರತೀಯ ನಾಗರಿಕರನ್ನು ಸಂವಿಧಾನ ವಿಭಜಿಸುವುದಿಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಸ್ಪಷ್ಟಪಡಿಸಿದರು. ನಾಗರಿಕರನ್ನು ಸಾಮೂಹಿಕವಾಗಿ ಮತದಾನದ ಹಕ್ಕಿನಿಂದ ವಂಚಿಸುವ ಯಾವುದೇ ಪ್ರಕ್ರಿಯೆಯು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತದ್ದು ಎಂದು ಅವರು ಹೇಳಿದರು. ಒಬ್ಬ ಭಾರತೀಯ ಪ್ರಜೆಯ ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ತೆಗೆದುಹಾಕುವುದು, ಅವರ ಪ್ರಜಾಸತ್ತಾತ್ಮಕ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಸೂಕ್ತ ಪ್ರಕ್ರಿಯೆ ಹಾಗೂ ನ್ಯಾಯಸಮ್ಮತ ಅವಕಾಶ ಇರಬೇಕು ಎಂದು ಅವರು ಒತ್ತಿ ಹೇಳಿದರು. ಮತದಾರ ಮೃತಪಟ್ಟಿರುವ ಸಂದರ್ಭವನ್ನು ಹೊರತುಪಡಿಸಿ, ಈಗಾಗಲೇ ಪಟ್ಟಿಯಲ್ಲಿ ದಾಖಲಾಗಿರುವ ವ್ಯಕ್ತಿಯ ಹೆಸರನ್ನು ನೋಟಿಸ್ ನೀಡದೆ ಅಥವಾ ವಿಚಾರಣೆಗೆ ಅವಕಾಶ ಕಲ್ಪಿಸದೆ ಅಳಿಸಬಾರದು ಎಂದರು.
ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ ಎಂದು ನ್ಯಾಯಾಲಯ ಹಲವು ತೀರ್ಪುಗಳಲ್ಲಿ ಹೇಳಿದ್ದರೂ, ಅದು ಸಂವಿಧಾನಾತ್ಮಕ ಹಕ್ಕು ಎಂದು ಗುರುತಿಸಲಾಗಿದೆ ಎಂದು ಭುಯಾನ್ ತಿಳಿಸಿದರು. ಭಾರತೀಯ ನಾಗರಿಕರ ಮತದಾನದ ಹಕ್ಕು ಸಂವಿಧಾನದ ಮೂಲ ರಚನೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಅದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು. ‘ಸಂವಿಧಾನಕ್ಕಿಂತ ಯಾರೂ ಮಿಗಿಲಲ್ಲ’ ಎಂದು ಒತ್ತಿ ಹೇಳಿದ ನ್ಯಾಯಮೂರ್ತಿ ಭುಯಾನ್, ಯಾವುದೇ ಪ್ರಾಧಿಕಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.