Search


ಪತ್ನಿ ಅಗಲಿಕೆ ನೋವಿನಲ್ಲಿದ್ದಾಗ ಸಾಂತ್ವನ ಹೇಳಿದ ನಾಡಿನ ಜನತೆಗೆ ದೇವೇಗೌಡರ ಕೃತಜ್ಞತೆ

ಬೆಂಗಳೂರು: ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಸಾಂತ್ವನ ಸೂಚಿಸಿದ ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಸಂದೇಶದಲ್ಲಿ, ದುಃಖದ ಈ ಘಳಿಗೆಯಲ್ಲಿ ದೊರೆತ ಪ್ರೀತಿ, ಬೆಂಬಲ ಮತ್ತು ಸಾಂತ್ವನ ತಮ್ಮ ಕುಟುಂಬಕ್ಕೆ ಅಪಾರ ಧೈರ್ಯ ನೀಡಿದೆ ಎಂದು ಹೇಳಿದ್ದಾರೆ.

ಚೆನ್ನಮ್ಮ ಅವರೊಂದಿಗೆ ಕಳೆದ 72 ವರ್ಷಗಳ ದಾಂಪತ್ಯ ಜೀವನವನ್ನು ಸ್ಮರಿಸಿರುವ ದೇವೇಗೌಡರು, ತಮ್ಮ ರಾಜಕೀಯ ಬದುಕಿನ ಏರಿಳಿತಗಳಲ್ಲಿ ಚೆನ್ನಮ್ಮ ಸದಾ ಬೆನ್ನೆಲುಬಾಗಿ ನಿಂತಿದ್ದರು ಎಂದು ಹೇಳಿದ್ದಾರೆ. ಶಾಸಕ, ಸಚಿವ, ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲೂ ಕುಟುಂಬದ ಎಲ್ಲ ಹೊಣೆಗಾರಿಕೆಯನ್ನು ಚೆನ್ನಮ್ಮ ಅವರು ಮೌನವಾಗಿ ನಿಭಾಯಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿರುವ ದೇವೇಗೌಡರು "ಚೆನ್ನಮ್ಮ ಅವರು ಯಾವುದೇ ಹುದ್ದೆ ಅಥವಾ ಪ್ರಚಾರದ ಆಸೆ ಇಟ್ಟುಕೊಳ್ಳದೆ, ಸರಳ ಜೀವನ, ದೈವಭಕ್ತಿ ಹಾಗೂ ಕುಟುಂಬದ ಮೌಲ್ಯಗಳಿಗೆ ಆದ್ಯತೆ ನೀಡಿದ ವ್ಯಕ್ತಿತ್ವ ಹೊಂದಿದ್ದರು ಎಂದು ದೇವೇಗೌಡರು ಹೇಳಿದ್ದಾರೆ. ಅವರ ತ್ಯಾಗ ಮತ್ತು ಸಹನೆಯೇ ತಮ್ಮ ಸಾರ್ವಜನಿಕ ಜೀವನವನ್ನು ಸುಗಮಗೊಳಿಸಿತು ಎಂದು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.

ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರು, ಮುಖ್ಯಮಂತ್ರಿ, ಕೇಂದ್ರ ಸಚಿವರು, ವಿವಿಧ ಪಕ್ಷಗಳ ನಾಯಕರು, ಶಾಸಕರು, ಸಂಸದರು, ಮಠಾಧೀಶರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಗಣ್ಯರಿಗೆ ದೇವೇಗೌಡರು ಪ್ರತ್ಯೇಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿ ಅಂತಿಮ ನಮನ ಸಲ್ಲಿಸಿದ ಪ್ರತಿಯೊಬ್ಬರ ಪ್ರೀತಿಯನ್ನು ತಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯ ಜನತೆ ತೋರಿದ ಆತ್ಮೀಯತೆ ಮತ್ತು ಜೆಡಿಎಸ್ ಕಾರ್ಯಕರ್ತರ ಸೇವಾಭಾವವನ್ನು ವಿಶೇಷವಾಗಿ ಶ್ಲಾಘಿಸಿರುವ ದೇವೇಗೌಡರು, ಈ ಸಂಕಷ್ಟದ ಸಮಯದಲ್ಲಿ ತಮ್ಮೊಂದಿಗೆ ನಿಂತ ಪ್ರತಿಯೊಬ್ಬರಿಗೂ ಕುಟುಂಬದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಚೆನ್ನಮ್ಮ ಅವರ ಆದರ್ಶಗಳನ್ನು ಜೀವನದಲ್ಲಿ ಉಳಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ.

By Ravikumar - 24-07-2026


Ads in Post