Search


ಧರ್ಮಸ್ಥಳ SIT ವರದಿ ಸಾರ್ವಜನಿಕಗೊಳಿಸಿ, ಸದನದಲ್ಲಿ ಚರ್ಚೆ ನಡೆಸಲಿ: ಯತ್ನಾಳ್ ಆಗ್ರಹ

ಬೆಂಗಳೂರು: ಧರ್ಮಸ್ಥಳ ಪ್ರಕರಣದ ವಿಶೇಷ ತನಿಖಾ ತಂಡ (SIT) ವರದಿಯನ್ನು ಸಾರ್ವಜನಿಕಗೊಳಿಸಿ, ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಸದನಕ್ಕೆ ಮಂಡಿಸಿ ಸಮಗ್ರ ಚರ್ಚೆ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದರು.

ಧರ್ಮಸ್ಥಳ ಪ್ರಕರಣ ಕುರಿತು ಮಾತನಾಡಿದ ಅವರು, ಧರ್ಮಸ್ಥಳದ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ಉದ್ದೇಶಪೂರ್ವಕ ಅಪಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿದರು. ಧರ್ಮಸ್ಥಳದ ಮೇಲೆ ಜನರಿಗೆ ಇರುವ ನಂಬಿಕೆಯನ್ನು ಕುಂದಿಸಲು ಪ್ರಯತ್ನ ನಡೆದಿದ್ದು, ವರದಿಯ ಮೂಲಕ ಸತ್ಯ ಹೊರಬರಬೇಕು ಎಂದರು. ಜೊತೆಗೆ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಯತ್ನಾಳ್, ಈ ಪ್ರಕರಣದ ಹಿಂದೆ ವಿದೇಶಿ ಶಕ್ತಿಗಳು, ಐಎಸ್‌ಐ ಅಥವಾ ಕಮ್ಯುನಿಸ್ಟ್ ಸಂಘಟನೆಗಳ ಕೈವಾಡ ಇದೆಯೇ ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕು ಎಂದರು. ಕಾಂಗ್ರೆಸ್ ಹೈಕಮಾಂಡ್ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.

ಇದೇ ವೇಳೆ ಮುಖ್ಯಮಂತ್ರಿ ತಮ್ಮನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಯಾರನ್ನೂ ಸುಮ್ಮನೆ ಜೈಲಿಗೆ ಕಳುಹಿಸಲಾಗುವುದಿಲ್ಲ. ತಪ್ಪು ಮಾಡಿರುವುದು ಸಾಕ್ಷಿ ಮತ್ತು ಪುರಾವೆಗಳ ಮೂಲಕ ನ್ಯಾಯಾಲಯದಲ್ಲಿ ಸಾಬೀತಾದರೆ ಮಾತ್ರ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

ಜೆಪಿಸಿ ಮಾದರಿಯ ಸಮಿತಿ ರಚಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ತಮ್ಮನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು. ತಮ್ಮ ವಿರುದ್ಧ ವಾರಂಟ್ ಹೊರಬಂದಿದೆ, ಶೀಘ್ರದಲ್ಲೇ ಜೈಲಿಗೆ ಹೋಗಲಿದ್ದಾರೆ ಎಂಬ ಸುದ್ದಿಗಳು ಪ್ರಸಾರವಾಗುತ್ತಿವೆ. ಆದರೆ ತಾವು ಯಾವುದೇ ಆತಂಕವಿಲ್ಲದೆ ಓಡಾಡುತ್ತಿದ್ದೇನೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಇಡಿ ಮತ್ತು ಆದಾಯ ತೆರಿಗೆ ಇಲಾಖೆ (IT) ಸ್ವಾಯತ್ತ ಸಂಸ್ಥೆಗಳಾಗಿದ್ದು, ತಮ್ಮ ಕಾನೂನು ಪ್ರಕ್ರಿಯೆಯಂತೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು. ಯಾವುದೇ ಪ್ರಕರಣದಲ್ಲಿ ಅಂತಿಮ ತೀರ್ಪು ನ್ಯಾಯಾಲಯದ ಮುಂದೆ ಇರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ ಎಂದರು.

By Ravikumar - 16-07-2026


Ads in Post