Search


ಧ್ರುವ್ ರಾಠಿ ಪೊಲೀಸ್ ವಶಕ್ಕೆ: ಪೌರತ್ವ, ವೀಸಾ ನಿಯಮ ಉಲ್ಲಂಘನೆ ಆರೋಪದ ಬೆನ್ನಲ್ಲೇ ಕ್ರಮ!

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಶನಿವಾರ ಬೆಳಿಗ್ಗೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಧ್ರುವ್ ರಾಠಿ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ರಾಠಿ ಅವರ ಪೌರತ್ವ, ಭಾರತಕ್ಕೆ ಪ್ರವೇಶಿಸಲು ಬಳಸಿದ ಪಾಸ್‌ಪೋರ್ಟ್, ವೀಸಾ ಹಾಗೂ ವಲಸೆ ನಿಯಮಗಳ ಪಾಲನೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಧ್ರುವ್ ರಾಠಿ ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ, ಅವರು ಯಾವ ಪಾಸ್‌ಪೋರ್ಟ್ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಯಾವ ವರ್ಗದ ವೀಸಾ ಅಥವಾ ಓವರ್‌ಸೀಸ್ ಸಿಟಿಜನ್‌ಶಿಪ್ ಆಫ್ ಇಂಡಿಯಾ (OCI) ಕಾರ್ಡ್ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಭಾರತಕ್ಕೆ ಆಗಮಿಸುವಾಗ ಅವರು ಘೋಷಿಸಿದ್ದ ಭೇಟಿಯ ಉದ್ದೇಶವೇನು ಎಂಬುದರ ಬಗ್ಗೆಯೂ ಸ್ಪಷ್ಟನೆ ಪಡೆಯಬೇಕು ಎಂದು ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.

ವಿದೇಶಿ ಪ್ರಜೆಗಳು ಭಾರತದ ಸಾಂವಿಧಾನಿಕ ಹಾಗೂ ಶಾಸನಬದ್ಧ ಸಂಸ್ಥೆಗಳ ವಿರುದ್ಧ ನಡೆಯುವ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸಲು ಅಥವಾ ಭಾಷಣ ಮಾಡಲು ಕಾನೂನು ಅನುಮತಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಧ್ರುವ್ ರಾಠಿ ಅವರು ವಿದೇಶಿಯರ ಕಾಯ್ದೆ 1946, ವೀಸಾ ಷರತ್ತುಗಳು ಅಥವಾ OCI ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಮಾಹಿತಿಯ ಪ್ರಕಾರ, ಧ್ರುವ್ ರಾಠಿ ತಂಗಿದ್ದ ಗುರುಗ್ರಾಮದ ನಿವಾಸದ ಹೊರಗೆ ತಡರಾತ್ರಿಯಿಂದಲೇ 50ಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದರು. ಶನಿವಾರ ಬೆಳಿಗ್ಗೆ ಸುಮಾರು 7.48ರ ವೇಳೆಗೆ ಅವರ ತಾಯಿ ಬಾಗಿಲು ತೆರೆದ ಬಳಿಕ ಪೊಲೀಸರು ಮನೆ ಪ್ರವೇಶಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಅಕ್ಟೋಬರ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಸೇರಿದಂತೆ ಇತರರೊಂದಿಗೆ ಧ್ರುವ್ ರಾಠಿ ಎಸ್‌ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಈ ಘಟನೆ ಬಳಿಕ ಅವರ ವಿರುದ್ಧ ತನಿಖೆಗೆ ಒತ್ತಾಯಗಳು ಕೇಳಿಬಂದಿದ್ದವು.

By Ravikumar - 10-10-2026


Ads in Post