ಬೆಂಗಳೂರು: ರೇಷನ್ ಕಾರ್ಡ್ ಇ-ಕೆವೈಸಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಿಂದ ಸಾರ್ವಜನಿಕರು ಗೊಂದಲಕ್ಕೀಡಾಗದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರದ ‘ಮೇರಾ ರೇಷನ್’ ಅಥವಾ ‘Mera eKYC’ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಮಾಡಿಕೊಳ್ಳುವ ಇ-ಕೆವೈಸಿ ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ಮಾನ್ಯವಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಇತ್ತೀಚೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗುತ್ತಿರುವ ಸರ್ವರ್ ಸಮಸ್ಯೆ ಹಾಗೂ ಇ-ಕೆವೈಸಿಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಆಧರಿಸಿ ಕೇಂದ್ರ ಸರ್ಕಾರದ ಮೇರಾ ರೇಷನ್ ಸೇರಿದಂತೆ ಕೆಲವು ಆ್ಯಪ್ಗಳ ಮೂಲಕ ಮುಖ ಗುರುತಿಸುವಿಕೆ ಬಳಸಿ ಮನೆಯಲ್ಲೇ ಇ-ಕೆವೈಸಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ‘ಮೇರಾ ರೇಷನ್’ ಆ್ಯಪ್ ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಗೆ ಸಂಬಂಧಿಸಿದ ಆ್ಯಪ್ ಆಗಿದ್ದು, ಕರ್ನಾಟಕ ಆಹಾರ ಇಲಾಖೆಯ ಪಡಿತರ ತಂತ್ರಾಂಶದೊಂದಿಗೆ ಇದರ ನೇರ ಡೇಟಾ ಸಂಪರ್ಕವಿಲ್ಲ. ಹೀಗಾಗಿ ಈ ಆ್ಯಪ್ ಮೂಲಕ ಇ-ಕೆವೈಸಿ ಮಾಡಿದರೂ ಅದು ಕರ್ನಾಟಕದ ಆಹಾರ ಇಲಾಖೆಯ ದಾಖಲೆಗಳಲ್ಲಿ ನವೀಕರಣವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ಕುರಿತು ಆಹಾರ ಇಲಾಖೆಯ ಉಪ ನಿರ್ದೇಶಕ ಕೆ.ಪಿ. ಮಧುಸೂದನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯನ್ನು ನಂಬಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು ಎಂದು ತಿಳಿಸಿದ್ದಾರೆ. ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬ ಸದಸ್ಯರೂ ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಪೋಸ್ ಯಂತ್ರದ ಮೂಲಕ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಇದೇ ವೇಳೆ, ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗುವ ದಟ್ಟಣೆ ಮತ್ತು ಸರ್ವರ್ ಸಮಸ್ಯೆಗಳನ್ನು ಕಡಿಮೆ ಮಾಡಲು ಆಹಾರ ಇಲಾಖೆ ತನ್ನದೇ ಆದ ಅಧಿಕೃತ ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಆ್ಯಪ್ ಅಧಿಕೃತವಾಗಿ ಬಿಡುಗಡೆಯಾಗುವವರೆಗೆ ಯಾವುದೇ ಮೂರನೇ ವ್ಯಕ್ತಿಯ ಆ್ಯಪ್ಗಳನ್ನು ಬಳಸಬಾರದು ಎಂದು ಇಲಾಖೆ ಎಚ್ಚರಿಸಿದೆ.
ಇ-ಕೆವೈಸಿಗೆ ಗಡುವು ವಿಸ್ತರಣೆ
ರಾಜ್ಯಾದ್ಯಂತ ಎದುರಾಗಿದ್ದ ಸರ್ವರ್ ಸಮಸ್ಯೆಯನ್ನು ಪರಿಗಣಿಸಿ ಆಹಾರ ಇಲಾಖೆ ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸುವ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿದೆ. ಹೀಗಾಗಿ ಇನ್ನುಳಿದಿರುವ ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಇ-ಕೆವೈಸಿ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ನಿಮ್ಮ ರೇಷನ್ ಕಾರ್ಡ್ನ ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಇದಕ್ಕಾಗಿ [ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್]ಗೆ ಭೇಟಿ ನೀಡಿ, ‘ಇ-ಸೇವೆಗಳು’ ವಿಭಾಗದಲ್ಲಿರುವ ‘e-Status’ ಲಿಂಕ್ ಮೂಲಕ ಮಾಹಿತಿ ಪರಿಶೀಲಿಸಬೇಕು. ಅಲ್ಲಿ ‘Done’ ಅಥವಾ ‘Completed’ ಎಂದು ತೋರಿಸಿದರೆ ಮಾತ್ರ ನಿಮ್ಮ ಇ-ಕೆವೈಸಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.