Search


ಕೈದಿ ಪತ್ನಿಯೊಂದಿಗೆ ಅಕ್ರಮ ಸಂಬಂಧ ‘ಋಣ ತೀರಿಸಲು’ ನಕಲಿ ಆದೇಶ ನೀಡಿ ಕೈದಿ ಬಿಡುಗಡೆ ಮಾಡಿದ್ದ ಡಿಐಜಿ ಸೋಮಶೇಖರ್

ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಶಂಕರ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದಲ್ಲಿ ಅಂದಿನ ಜೈಲು ಮುಖ್ಯ ಅಧೀಕ್ಷಕ ಹಾಗೂ ಹಾಲಿ ಕಲಬುರಗಿ ಜೈಲು ಡಿಐಜಿ ಎಂ. ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ತನಿಖೆಯಲ್ಲಿ ಶಂಕರ್‌ನ ಬಿಡುಗಡೆ ಹಿಂದೆ ವೈಯಕ್ತಿಕ ಸಂಬಂಧ ಹಾಗೂ ಪ್ರತಿಫಲದ ಆರೋಪವೂ ಕೇಳಿಬಂದಿದೆ. ಡಿಐಜಿ ಸೋಮಶೇಖರ್ ಹಾಗೂ ಜೈಲು ಸಿಬ್ಬಂದಿ ಶ್ರೀಕಾಂತ್ ಅವರು ಶಂಕರ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಅದರ ಪ್ರತಿಫಲವಾಗಿ ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸುವ ಸಂಚು ರೂಪಿಸಲಾಗಿತ್ತು ಎಂಬ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಶಂಕರ್ ಪತ್ನಿಯ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದು, ಆಕೆಯ ಹೇಳಿಕೆಯಲ್ಲಿ ಸೋಮಶೇಖರ್ ಅವರ ಪಾತ್ರದ ಬಗ್ಗೆ ಮಾಹಿತಿ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ಸೋಮಶೇಖರ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಜೈಲು ಸಿಬ್ಬಂದಿ ಶ್ರೀಕಾಂತ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿದ್ದು, ನಕಲಿ ಆದೇಶ ಸೃಷ್ಟಿ ಹಾಗೂ ಕೈದಿ ಬಿಡುಗಡೆಗೆ ಸಂಬಂಧಿಸಿದಂತೆ ಅವರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ಪ್ರಕರಣದ ಹಿನ್ನೆಲೆ: 2001ರಲ್ಲಿ ನಡೆದ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಂಕರ್‌ಗೆ 2004ರಲ್ಲಿ ತ್ವರಿತಗತಿ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿತ್ತು. ಶಿಕ್ಷೆಯನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋದರೂ ಅರ್ಜಿಗಳು ತಿರಸ್ಕೃತವಾಗಿದ್ದವು.

ನಂತರ 2018ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕಾಣುವ ನಕಲಿ ದಾಖಲೆಯನ್ನು ಸೃಷ್ಟಿಸಿ ಜೈಲು ಅಧಿಕಾರಿಗಳಿಗೆ ಸಲ್ಲಿಸಿದ್ದ ಶಂಕರ್, ₹10 ಸಾವಿರ ದಂಡ ಪಾವತಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಹಲವು ವರ್ಷಗಳ ಬಳಿಕ ಕಾರಾಗೃಹ ಇಲಾಖೆಗೆ ಬಂದ ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಪ್ರಕರಣ ಮತ್ತೆ ಬೆಳಕಿಗೆ ಬಂದಿತ್ತು. ನಕಲಿ ಆದೇಶವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿದಾಗ ಅದು ನಕಲಿ ಎಂಬುದು ದೃಢಪಟ್ಟಿತ್ತು.

ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಕಳೆದ ಜೂನ್‌ನಲ್ಲಿ ಶಂಕರ್‌ನನ್ನು ಮೈಸೂರಿನಲ್ಲಿ ಬಂಧಿಸಿದ್ದರು. ಆತನ ವಿಚಾರಣೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಎಫ್‌ಡಿಎ ಶ್ರೀಕಾಂತ್‌ನನ್ನೂ ಬಂಧಿಸಲಾಗಿತ್ತು. ಬಳಿಕ ತನಿಖೆಯಲ್ಲಿ ಸೋಮಶೇಖರ್ ಅವರ ಪಾತ್ರದ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಪೊಲೀಸರ ಪ್ರಕಾರ, ಸೋಮಶೇಖರ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಮರೆಮಾಚಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿಲ್ಲ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 9ರವರೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ನಕಲಿ ಆದೇಶ ಸೃಷ್ಟಿ, ಕೈದಿ ಬಿಡುಗಡೆ ಹಾಗೂ ವೈಯಕ್ತಿಕ ಸಂಬಂಧದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

By Ravikumar - 06-10-2026


Ads in Post