Search


ದರ್ಶನ್ ಭೇಟಿಗೆ ಬಂದ ರಚಿತಾ ರಾಮ್‌ಗೆ ನಿರಾಸೆ.. 2 ಗಂಟೆ ಕಾದರೂ ಸಿಗಲಿಲ್ಲ ಭೇಟಿಯ ಭಾಗ್ಯ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅವರಿಗೆ ನಿರಾಸೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಕಾದರೂ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ ನಟಿ ಬೇಸರದಿಂದಲೇ ವಾಪಸ್ ತೆರಳಿದ್ದಾರೆ.

ತಮ್ಮ ಸಹನಟ ದರ್ಶನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ರಚಿತಾ ರಾಮ್ ಕಾರಾಗೃಹದ ಆವರಣಕ್ಕೆ ಆಗಮಿಸಿದ್ದರು. ಜೈಲು ನಿಯಮಾವಳಿಗಳ ಪ್ರಕಾರ, ನಟಿ ಬಂದಿರುವ ವಿಚಾರವನ್ನು ಜೈಲಾಧಿಕಾರಿಗಳು ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ.

ಆದರೆ, ಹೊರಗಿನಿಂದ ಬಂದವರನ್ನು ಭೇಟಿಯಾಗಲು ದರ್ಶನ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಾಯುತ್ತಿದ್ದ ರಚಿತಾ ರಾಮ್, ಅಂತಿಮವಾಗಿ ಭೇಟಿಗೆ ಅವಕಾಶ ಸಿಗದ ಕಾರಣ ಕಾರಾಗೃಹದಿಂದ ಹಿಂತಿರುಗಿದ್ದಾರೆ. ಜೈಲು ಮೂಲಗಳ ಪ್ರಕಾರ, ದರ್ಶನ್ ಅವರು ಸದ್ಯ ತಮ್ಮ ಪತ್ನಿ ವಿಜಯಲಕ್ಷ್ಮಿ, ಮಗ, ತಾಯಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರನ್ನು ಹೊರತುಪಡಿಸಿ ಚಿತ್ರರಂಗದ ಸಹೋದ್ಯೋಗಿಗಳು ಸೇರಿದಂತೆ ಇತರ ಆಪ್ತರನ್ನು ಭೇಟಿಯಾಗಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಇನ್ನು ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ದರ್ಶನ್ ಆತಂಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾನೂನು ವಿಚಾರಗಳು ಹಾಗೂ ಪ್ರಕರಣದ ಬೆಳವಣಿಗೆಗಳಿಂದಾಗಿ ಅವರು ಯಾರನ್ನೂ ಭೇಟಿಯಾಗದೆ ಏಕಾಂತವಾಗಿರಲು ಬಯಸುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಇದೀಗ ಚರ್ಚೆಗೆ ಕಾರಣವಾಗಿದೆ.

By Ravikumar - 02-10-2026


Ads in Post