ಹೈದರಾಬಾದ್ನಲ್ಲಿ ನಡೆದ ‘ಟಾಕ್ಸಿಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದ ವೇಳೆ ಸೌಂಡ್ ಸಿಸ್ಟಂ ಅಳವಡಿಸಿದ್ದ ಕಬ್ಬಿಣದ ಪಿಲ್ಲರ್ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಆಗಸ್ಟ್ 22ರಂದು ಮಲ್ಲಾ ರೆಡ್ಡಿ ಯೂನಿವರ್ಸಿಟಿ ಆವರಣದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಆಯೋಜಕರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ನಟ ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಚಿತ್ರತಂಡದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಶ್ ಮಾತನಾಡುತ್ತಿದ್ದ ವೇಳೆ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಸೇರಿದ್ದ ಸಂದರ್ಭದಲ್ಲಿ ಸೌಂಡ್ ಸಿಸ್ಟಂ ಅಳವಡಿಸಿದ್ದ ರಚನೆ ಕುಸಿದಿದೆ ಎನ್ನಲಾಗಿದೆ. ರಚನೆಯ ಮೇಲೆ ಕೆಲ ವಿದ್ಯಾರ್ಥಿಗಳು ಕುಳಿತಿದ್ದ ವೇಳೆ ಹೆಚ್ಚಿನ ಭಾರದಿಂದ ಅದು ಕುಸಿದಿದ್ದು, ಸೌಂಡ್ ಬಾಕ್ಸ್ಗಳೊಂದಿಗೆ ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಕಾರ್ಯಕ್ರಮದ ಭದ್ರತಾ ವ್ಯವಸ್ಥೆ, ಸೌಂಡ್ ಸಿಸ್ಟಂ ಅಳವಡಿಕೆ ಹಾಗೂ ಜನಸಂದಣಿ ನಿಯಂತ್ರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಲ್ಲಾ ರೆಡ್ಡಿ ಯೂನಿವರ್ಸಿಟಿ ಆಡಳಿತ ಮಂಡಳಿ ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.