Search


ಡಿಕೆ ಸರ್ಕಾರ ಯುಟರ್ನ್; ಪಾರ್ಕ್ ಒತ್ತುವರಿ ಮಾಡಲು ತಂದಿದ್ದ ಕಾಯ್ದೆ ವಾಪಾಸ್

ಬೆಂಗಳೂರು: ಸಾರ್ವಜನಿಕರು, ಪರಿಸರವಾದಿಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ವಿವಾದಾತ್ಮಕ ಕರ್ನಾಟಕ ಸರ್ಕಾರಿ ಉದ್ಯಾನಗಳ ಸಂರಕ್ಷಣೆ (ತಿದ್ದುಪಡಿ) ಮಸೂದೆಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. 1975ರ ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆಗೆ ತಿದ್ದುಪಡಿ ತಂದು, ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಸರ್ಕಾರ ಉದ್ದೇಶಿಸಿತ್ತು. ಆದರೆ ಈ ಪ್ರಸ್ತಾವಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ವಿಧಾನಸಭೆಯಲ್ಲಿ ಸಮರ್ಪಕ ಚರ್ಚೆಯಿಲ್ಲದೆ ಮಸೂದೆ ಅಂಗೀಕರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಮಸೂದೆ ವಿರುದ್ಧ ಸಾರ್ವಜನಿಕರು ಹಾಗೂ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮಸೂದೆಯನ್ನು ಹಿಂಪಡೆದಿಲ್ಲ. ಸಾರ್ವಜನಿಕರ ಹಿತದೃಷ್ಟಿ ಮತ್ತು ಅವರ ಮನವಿಗೆ ಸ್ಪಂದಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸದನದಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲು ಬಿಜೆಪಿ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ ಅವರು, ಚರ್ಚೆಗೆ ಅವಕಾಶವಿದ್ದರೂ ಬಿಜೆಪಿ ಸದಸ್ಯರು ಭಾಗವಹಿಸುವ ಬದಲು ಗದ್ದಲ ಸೃಷ್ಟಿಸಿದರು ಎಂದು ಟೀಕಿಸಿದರು. ಮುಂದಿನ ಅಧಿವೇಶನದಲ್ಲಿ ಇದೇ ಮಸೂದೆಯನ್ನು ಯಾವುದೇ ಬದಲಾವಣೆ ಮಾಡದೆ, 'ಕಾಮಾ ಅಥವಾ ಫುಲ್‌ಸ್ಟಾಪ್' ಕೂಡ ಬದಲಾಯಿಸದೆ ಯಥಾವತ್ತಾಗಿ ಮರುಮಂಡಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಉದ್ಯಾನವನಗಳ ಜಾಗವನ್ನು ಕೇವಲ ಸರ್ಕಾರಿ ಮೂಲಸೌಕರ್ಯ ಯೋಜನೆಗಳಿಗೆ ಮಾತ್ರ ಬಳಸುವ ಉದ್ದೇಶವಿದೆ. ಸರ್ಕಾರ ಪಾರದರ್ಶಕ ಆಡಳಿತಕ್ಕೆ ಬದ್ಧವಾಗಿದೆ. ಮಸೂದೆಯ ಕುರಿತು ಆರೋಗ್ಯಕರ ಚರ್ಚೆ ನಡೆಸಿ ಸಕಾರಾತ್ಮಕ ಸಲಹೆಗಳನ್ನು ನೀಡಿದರೆ ಸರ್ಕಾರ ಅವುಗಳನ್ನು ಮುಕ್ತ ಮನಸ್ಸಿನಿಂದ ಪರಿಗಣಿಸಲಿದೆ ಎಂದು ಅವರು ಹೇಳಿದರು. ಪ್ರತಿ ವಿಷಯಕ್ಕೂ ಕಾರಣವಿಲ್ಲದೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧವೂ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

By Ravikumar - 03-09-2026


Ads in Post