ಬೆಂಗಳೂರು: ಇನ್ನೇನು ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಹರಿದು ಬರುತ್ತಿದೆ. ಇದರ ನಡುವೆ ಇಂದು ಬೆಳಿಗ್ಗೆ ಡಿಕೆಶಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರ (BS Yediyurappa) ನಿವಾಸಕ್ಕೆ ಭೇಟಿ ನೀಡಿ, ಪದಗ್ರಹಣ ಕಾರ್ಯಕ್ರಮಕ್ಕೆ ಬರುವಂತೆ ಮನವೊಲಿಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಅಧಿಕೃತ ನಿವಾಸ ‘ಧವಳಗಿರಿ’ಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಪ್ರೀತಿಯಿಂದ ಪ್ರಮಾಣವಚನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಿದರು. ಇದೇ ವೇಳೆ ರಾಜ್ಯದಲ್ಲಿ ಹೊಸ ಸರ್ಕಾರವನ್ನು ಯಶಸ್ವಿಯಾಗಿ ನಡೆಸಲು ಮತ್ತು ರಾಜ್ಯದ ಅಭಿವೃದ್ಧಿಗೆ ವಿರೋಧ ಪಕ್ಷದ ಕಡೆಯಿಂದ ಅಗತ್ಯ ಸಹಕಾರ ನೀಡಬೇಕೆಂದು ಹಿರಿಯ ನಾಯಕನಲ್ಲಿ ಕೋರಿಕೊಂಡರು.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವ ಅಥಿತಿಗಳ ವಿವರ..!
ಪದಗ್ರಹಣ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ನ ಪ್ರಮುಖ ನಾಯಕರು ಸಾಕ್ಷಿಯಾಗಲಿದ್ದಾರೆ. ಇವರೊಂದಿಗೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು (PCC Presidents) ಮತ್ತು ಪ್ರಮುಖ ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಮಂಗಳಕರ ಚಾಲನೆ ನೀಡಲು ಸರ್ವಧರ್ಮ ಗುರುಗಳನ್ನು ಆಹ್ವಾನಿಸಲಾಗಿದ್ದು, ಹಿಂಧೂ, ಮುಸ್ಲಿಂ, ಕ್ರೈಸ್ಥ ಮತಗಳ ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ತವರೂರಿನ ಶಾಲಾ ಮಕ್ಕಳಿಗೂ ವಿಶೇಷ ಆಹ್ವಾನ...!
ಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅವರೊಂದಿಗೆ ಸಮಾಜದ ಬೆನ್ನೆಲುಬಾಗಿರುವ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆಗಳ ನಾಯಕರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಮುಖಂಡರನ್ನು ಅತ್ಯಂತ ಗೌರವದಿಂದ ಆಹ್ವಾನಿಸಲಾಗಿದೆ.
ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರು, ಪ್ರಮುಖ ಸಾಹಿತಿಗಳು ಹಾಗೂ ಕಲಾವಿದರು ಈ ಸಮಾರಂಭಕ್ಕೆ ಬರಲಿದ್ದಾರೆ. ಆರ್ಥಿಕ ವಲಯದಿಂದ ಪ್ರಮುಖ ಕೈಗರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು ಹಾಗೂ ದೇಶದ ಭವಿಷ್ಯವಾಗಿರುವ ಯುವ ಮುಖಂಡರಿಗೆ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿದೆ. ಒಟ್ಟಾರೆಯಾಗಿ ರಾಜಕೀಯ ಗಣ್ಯರು ಮತ್ತು ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಪ್ರಮಾಣ ವಚನ ಕಾರ್ಯಕ್ರಮ ಸಾಕ್ಷಿಯಾಗಲಿದೆ.