ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು ಹಾಗೂ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಈರುಳ್ಳಿ ಮಂಡಿಯಲ್ಲಿ ಮೂಟೆಯ ಮೇಲೆಯೇ ಕುಳಿತು ರೈತರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ತೂಕದಲ್ಲಿ ಯಾವುದೇ ಮೋಸ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ ಡಿಕೆಶಿಗೆ, ತೂಕದಲ್ಲಿ ಮೋಸ ಇಲ್ಲ ಸರ್ ಎಂದು ರೈತರು ಉತ್ತರಿಸಿದರು. ಈ ಮಂಡಿಗೆ ಬರಲು ಯಾರಾದರೂ ಒತ್ತಾಯಿಸುತ್ತಾರೆಯೇ? ಬ್ರೋಕರ್ಗಳಿಂದ ಏನಾದರೂ ಸಮಸ್ಯೆಯಾಗುತ್ತಿದೆಯೇ? ಎಷ್ಟು ಕಮಿಷನ್ ಪಡೆಯಲಾಗುತ್ತಿದೆ? ಎಂಬುದರ ಕುರಿತು ರೈತರು ಹಾಗೂ ವ್ಯಾಪಾರಿಗಳಿಂದ ಮಾಹಿತಿ ಪಡೆದರು. ಬಳಿಕ ಈರುಳ್ಳಿ ಮಂಡಿಯ ನಂತರ ಬೆಳ್ಳುಳ್ಳಿ, ತೆಂಗಿನಕಾಯಿ ಹಾಗೂ ಆಲೂಗಡ್ಡೆ ಮಂಡಿಗಳಿಗೂ ಭೇಟಿ ನೀಡಿ ಅಲ್ಲಿನ ವ್ಯಾಪಾರದ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಈ ವೇಳೆ ರೈತರು ಎಪಿಎಂಸಿಯಲ್ಲಿನ ಕೆಲವು ಸಮಸ್ಯೆಗಳನ್ನು ಡಿಕೆಶಿ ಅವರ ಗಮನಕ್ಕೆ ತಂದರು. ಅಧಿಕಾರಿಗಳ ಸರಿಯಾದ ಮೇಲ್ವಿಚಾರಣೆ ಇಲ್ಲದ ಕಾರಣ ಒಂದೊಂದು ಕಡೆ ಒಂದೊಂದು ದರ ಹೇಳಲಾಗುತ್ತಿದೆ ಎಂದು ಆರೋಪಿಸಿದರು. ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಾರದ ಸಮಸ್ಯೆ ಇರುವುದರಿಂದ ಯಶವಂತಪುರ ಎಪಿಎಂಸಿಗೆ ಬರಬೇಕಾಗುತ್ತದೆ ಎಂದು ರೈತರೊಬ್ಬರು ತಿಳಿಸಿದರು. ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, 65 ಕೆಜಿ ತೂಕದ ಮೂಟೆಗೆ ಕೇವಲ 50 ಕೆಜಿ ಲೆಕ್ಕ ಹಾಕುತ್ತಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದರು. ರೈತರ ಮಾತುಗಳನ್ನು ಗಮನದಿಂದ ಆಲಿಸಿದ ಡಿಕೆಶಿ, ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆದು, ಮಾರುಕಟ್ಟೆಯ ವ್ಯವಸ್ಥೆ ಹಾಗೂ ರೈತರಿಗೆ ಸರಿಯಾದ ಬೆಲೆ ಸಿಗುತ್ತಿರುವ ಬಗ್ಗೆ ವಿಚಾರಿಸಿದರು.
ರೈತರ ವೈಯಕ್ತಿಕ ಹಾಗೂ ಕೃಷಿ ಸಮಸ್ಯೆಗಳ ಬಗ್ಗೆಯೂ ಡಿಕೆಶಿ ಮಾಹಿತಿ ಪಡೆದರು. ಎಲ್ಲಿಂದ ಬಂದಿದ್ದೀರಿ? ಬೆಳೆಗಳಿಗೆ ಸರಿಯಾದ ದರ ಸಿಗುತ್ತಿದೆಯೇ? ಎಷ್ಟು ಎಕರೆ ಜಮೀನಿದೆ? ಎಕರೆಗೆ 20ರಿಂದ 30 ಸಾವಿರ ರೂಪಾಯಿ ಉಳಿಯುತ್ತದೆಯೇ? ಕಳೆದ ವರ್ಷ ಲಾಭ ಹೇಗಿತ್ತು? ಮನೆಯಲ್ಲಿ ಎಷ್ಟು ಮಕ್ಕಳು ಇದ್ದಾರೆ? ಎಂದು ಪ್ರಶ್ನಿಸಿದರು. ಈ ವೇಳೆ ರೈತರೊಬ್ಬರು ಜಮೀನಿನಲ್ಲಿಯೇ ಸಣ್ಣ ಮನೆ ಕಟ್ಟಿಕೊಂಡಿದ್ದು, ಸರಿಯಾದ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ನೀಡಿ, ರಸ್ತೆ ಸಮಸ್ಯೆಯನ್ನು ನಂತರ ನೋಡೋಣ ಎಂದು ಭರವಸೆ ನೀಡಿದರು. ರೈತನ ಮೊಬೈಲ್ ಸಂಖ್ಯೆಯನ್ನೂ ಪಡೆದುಕೊಂಡ ಅವರು, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂಪಾಯಿ ಬರುತ್ತಿದೆಯೇ ಮತ್ತು ಗೃಹಜ್ಯೋತಿ ಯೋಜನೆಯ ಲಾಭ ದೊರೆಯುತ್ತಿದೆಯೇ ಎಂಬುದರ ಬಗ್ಗೆಯೂ ವಿಚಾರಿಸಿದರು.
ಆಲೂಗಡ್ಡೆ ಮಂಡಿಗೆ ಭೇಟಿ ನೀಡಿದ ಡಿಕೆಶಿ, ಉತ್ಪನ್ನದ ಗುಣಮಟ್ಟ ಹಾಗೂ ಹರಾಜು ಪ್ರಕ್ರಿಯೆ ಬಗ್ಗೆ ಮಹಿಳಾ ವ್ಯಾಪಾರಿಯಿಂದ ಮಾಹಿತಿ ಪಡೆದರು. ವ್ಯಾಪಾರಿಗಳು ಇಲ್ಲಿ ಬಂದು ಸರಕು ಖರೀದಿಸುತ್ತಾರೆ, ಶೇ.6ರಷ್ಟು ಕಮಿಷನ್ ಪಡೆಯುತ್ತಾರೆ ಮತ್ತು ಇಲ್ಲಿಂದ ಸರಕು ತೆಗೆದುಕೊಂಡು ಚಿಕ್ಕಬಳ್ಳಾಪುರದಲ್ಲಿ ಮಾರಾಟ ಮಾಡಬೇಕಾಗುತ್ತದೆ ಎಂದು ಮಹಿಳೆ ತಿಳಿಸಿದರು. ಹರಾಜಿನಲ್ಲಿ ಯಾವುದೇ ಮೋಸ ನಡೆಯುತ್ತಿದೆಯೇ ಎಂದು ಡಿಕೆಶಿ ಪ್ರಶ್ನಿಸಿದಾಗ, ಇಲ್ಲ ಸ್ವಾಮಿ ಎಂದು ಮಹಿಳೆ ಉತ್ತರಿಸಿದರು. ತಿಂಗಳಲ್ಲಿ ಎಷ್ಟು ಬಾರಿ ಎಪಿಎಂಸಿಗೆ ಬರುತ್ತೀರಿ? ಇಷ್ಟು ಮೂಟೆ ವ್ಯಾಪಾರ ಮಾಡಲು ಎಷ್ಟು ದಿನ ಬೇಕಾಗುತ್ತದೆ? ಎಂದು ಡಿಕೆಶಿ ಮತ್ತಷ್ಟು ಮಾಹಿತಿ ಪಡೆದರು. ಇದೇ ವೇಳೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಪ್ರಶ್ನಿಸಿದ ಅವರು, ಎರಡು ಸಾವಿರ ರೂಪಾಯಿ ಬರುತ್ತಿದೆಯೇ? ಉಚಿತ ವಿದ್ಯುತ್ ಸಿಗುತ್ತಿದೆಯೇ? ಬಸ್ನಲ್ಲಿ ಉಚಿತ ಪ್ರಯಾಣ ಮಾಡುತ್ತೀರಾ? ಇದೆಲ್ಲ ಯಾರು ಮಾಡಿದ್ದು ಎಂದು ಕೇಳಿದರು.
ಇದಕ್ಕೆ ಮಹಿಳೆಯೊಬ್ಬರು, ಸಿದ್ದರಾಮಯ್ಯ ಅವರು ಮಾಡಿದ್ದಾರೆ. ನಾವು ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ಗೆ ಮತ ಹಾಕುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ “ನಾನ್ಯಾರು ಅಂತ ಗೊತ್ತಾ?” ಎಂದು ಡಿಕೆಶಿ ಕೇಳಿದಾಗ, ಮಹಿಳೆ ಮುಗ್ಧತೆಯಿಂದ “ಇಲ್ಲ ಸ್ವಾಮಿ” ಎಂದು ಉತ್ತರಿಸಿದ್ದು, ಇದನ್ನು ಕೇಳಿ ಡಿಕೆಶಿ ಮಂದಹಾಸ ಬೀರಿದರು. ಇತ್ತ ಡಿಕೆಶಿ ಅವರ ದಿಢೀರ್ ಭೇಟಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನೀವು ಬಂದಿರುವುದು ನಮಗೆ ಸಂತಸ ತಂದಿದೆ. ಕಳೆದ 30ರಿಂದ 40 ವರ್ಷಗಳಲ್ಲಿ ಎಪಿಎಂಸಿಗೆ ಇಂತಹ ರೀತಿಯಲ್ಲಿ ಯಾರೂ ಬಂದು ರೈತರ ಸಮಸ್ಯೆ ಕೇಳಿಲ್ಲ. ಕೃಷಿ ಸಚಿವರೂ ಇಲ್ಲಿಗೆ ಬಂದಿಲ್ಲ, ಆದರೆ ನೀವು ಸ್ವತಃ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿದ್ದೀರಿ ಎಂದು ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.