ಚೆನ್ನೈ: ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಟಿವಿಕೆ ಸರ್ಕಾರ ಕೆಡವಲು ಸಂಚು ನಡೆದಿದೆ ಎನ್ನುವ ಆರೋಪಗಳು ಬಂದಿದ್ದು. ಪ್ರತಿ ಶಾಸಕರಿಗೆ 35 ಕೋಟಿ ಆಫರ್ ನೀಡಲಾಗಿದೆ ಎನ್ನಲಾಗಿದೆ. ಆದರೆ ಈ ಪ್ರಯತ್ನವನ್ನ ರಾಜ್ಯ ಗುಪ್ತಚರ ಅಧಿಕಾರಿಗಳು ವಿಫಲಗೊಳಿಸಿದ್ದೇವೆ ಎಂದು ಹೇಳಿಕೊಂಡಿದೆ.
ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕರೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಅಧಿಕಾರಿಗಳು ಸಲಹಾ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ಸೇರಿ ಮೂವರನ್ನ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ತನಿಖೆ ಸಮಯದಲ್ಲಿ ಅಧಿಕಾರಿಗಳು ಡಿಎಂಕೆ (DMK) ಶಾಸಕ ಸೆಂಥಿಲ್ ಬಾಲಾಜಿ ಅವರೊಂದಿಗಿನ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿಯನ್ನ ಚೆನ್ನೈನಲ್ಲಿ, ಉಳಿದ ಇಬ್ಬರನ್ನು ಕರೂರಿನಲ್ಲಿ ಬಂಧಿಸಲಾಗಿದೆ. ಈ ಪಿತೂರಿ ಜಾಲವನ್ನ ಬುಡಸಮೇತ ಬಯಲಿಗೆಳೆಯಲು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
35 ಕೋಟಿ ಆಫರ್..!
ಟಿವಿಕೆ ಶಾಸಕ ಎನ್. ಇಳಯರಾಜ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್, ಟಿವಿಕೆ ನಾಯಕರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಐಪಿಡಿಎಸ್ನ ವ್ಯಕ್ತಿಯೊಬ್ಬರು ತಮಗೆ 35 ಕೋಟಿ ರೂ.ಗಳ ಆಮಿಷ ಒಡ್ಡಿದ್ದಾರೆ. ಈ ಆಫರ್ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಅವರ ಆಪ್ತರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ವಿಜಯ್ ನೇತೃತ್ವದ ಸರ್ಕಾರ ಉರುಳಿಸಲು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರೊಂದಿಗೆ ಡಿಎಂಕೆ ಕೈಜೋಡಿಸುತ್ತಿದೆ. ಹಲವಾರು ಟಿವಿಕೆ ಶಾಸಕರಿಗೆ ಪಕ್ಷಾಂತರ ಮಾಡಲು ಹಣದ ಆಫರ್ ನೀಡಲಾಗಿದೆ. ಸೆಂಥಿಲ್ ಬಾಲಾಜಿ ಅವರೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವ್ಯಕ್ತಿಗಳು ಹಾಗೂ ‘ಕರೂರ್ ಗ್ಯಾಂಗ್’ ಎಂದು ಕರೆಯಲ್ಪಡುವವರು ಇದರಲ್ಲಿ ಭಾಗಿಯಾಗಿದ್ದಾರೆ. ಪೊಲೀಸರು ಕಾನೂನು ಕ್ರಮ ಕೈಗೊಂಡು ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು. ಅವರು ಇಂತಹ ದುಷ್ಕೃತ್ಯಗಳನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.