Search


ದಸರಾ ಆನೆಗಳ ತೂಕ ಪರೀಕ್ಷೆ ; ಅತಿ ಹೆಚ್ಚು ತೂಕವಿರುವ ಆನೆಗಳ ಪೈಕಿ ಶ್ರೀಕಂಠ ಮೊದಲಿಗ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಭರದ ಸಿದ್ಧತೆಗಳು ಆರಂಭಗೊಂಡಿವೆ. ಹುಣಸೂರಿನ ವೀರನಹೊಸಳ್ಳಿಯಿಂದ ಮೈಸೂರಿಗೆ ಆಗಮಿಸಿರುವ ಮೊದಲ ತಂಡದ ಗಜಪಡೆಯ ಆನೆಗಳ ತೂಕ ಪರೀಕ್ಷೆ ನಡೆಸಲಾಗಿದೆ. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಹಾಗೂ ಕಾವೇರಿ ಸೇರಿದಂತೆ 9 ಆನೆಗಳ ತೂಕ ಪರೀಕ್ಷೆ ನಡೆಯಿತು. ಈ ಪೈಕಿ 5,790 ಕೆಜಿ ತೂಕದ ಶ್ರೀಕಂಠ ಆನೆ ಅತಿ ಹೆಚ್ಚು ತೂಕ ಹೊಂದುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ.

ಗಜಪಡೆಯ 9 ಆನೆಗಳ ತೂಕ

ಶ್ರೀಕಂಠ – 5,790 ಕೆಜಿ

ಏಕಲವ್ಯ – 5,600 ಕೆಜಿ

ಧನಂಜಯ – 5,530 ಕೆಜಿ

ಮಹೇಂದ್ರ – 5,490 ಕೆಜಿ

ಪ್ರಶಾಂತ – 5,205 ಕೆಜಿ

ಗೋಪಿ – 5,170 ಕೆಜಿ

ಶ್ರೀರಾಮ – 4,820 ಕೆಜಿ

ಲಕ್ಷ್ಮೀ – 3,990 ಕೆಜಿ

ಕಾವೇರಿ – 3,075 ಕೆಜಿ

ಆಗಸ್ಟ್ 26ರಂದು ವೀರನಹೊಸಳ್ಳಿಯಲ್ಲಿ ಗಜಪಡೆಗೆ ಫಲತಾಂಬೂಲ ನೀಡುವ ಮೂಲಕ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ದಸರಾ ಗಜಪಡೆಯ ಮೈಸೂರು ಪ್ರಯಾಣಕ್ಕೆ ಚಾಲನೆ ನೀಡಿದ್ದರು. ಬಳಿಕ ಆಗಸ್ಟ್ 28ರಂದು ದಸರಾ ಗಜಪಡೆ ಜಯಮಾರ್ತಾಂಡ ದ್ವಾರ ಮೂಲಕ ಮೈಸೂರು ಅರಮನೆ ಪ್ರವೇಶಿಸಿತ್ತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಗಜಪಡೆಗೆ ಭರ್ಜರಿ ಸ್ವಾಗತ ಕೋರಲಾಗಿತ್ತು.

ಈ ಬಾರಿಯ ದಸರಾ ಉತ್ಸವ ವಿಭಿನ್ನವಾಗಿರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತುಂಬಾ ವಿಶೇಷ ಹಾಗೂ ವಿಶಿಷ್ಟವಾಗಿ ದಸರಾ ಮಹೋತ್ಸವ ಆಚರಿಸುವುದಾಗಿ ಅವರು ಹೇಳಿದ್ದಾರೆ. ಈ ಬಾರಿ ದಸರಾದಲ್ಲಿ ಸ್ಯಾಂಡಲ್‌ವುಡ್ ಕೂಡ ಭಾಗಿಯಾಗಲಿದೆ ಎಂದು ತಿಳಿಸಿರುವ ಸಿಎಂ, ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರೊಂದಿಗೆ ಈ ಕುರಿತು ಮಾತನಾಡಿರುವುದಾಗಿ ಹೇಳಿದ್ದಾರೆ. ಪೊಲೀಸ್ ಬ್ಯಾಂಡ್ ಜೊತೆಗೆ ಆರ್ಮಿ ಬ್ಯಾಂಡ್ ಕೂಡ ಭಾಗಿಯಾಗುವಂತೆ ಮನವಿ ಮಾಡಲಾಗಿದೆ. ಎಲ್ಲರೊಂದಿಗೆ ಚರ್ಚಿಸಿದ ಬಳಿಕ ದಸರಾ ಉದ್ಘಾಟಕರ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

By Ravikumar - 30-08-2026


Ads in Post