ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ, ಎನ್ಸಿಪಿ (ಎಸ್) ಅಧ್ಯಕ್ಷ ಶರದ್ ಪವಾರ್ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಅನಿರೀಕ್ಷಿತ ಭೇಟಿ ನಡೆದಿದೆ. ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿರುವ ನಡವೆ ಈ ಭೇಟಿ ನಡೆದಿದ್ದು. ರಾಜಕೀಯ ವಿಶ್ಲೇಷಕರು ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ವಿಶ್ಲೇಷಣೆ ಮಾಡಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಶರದ್ ಪವಾರ್ ವಿಧಾನಸಭೆಗೆ ತೆರಳಿದ್ದರು. ಈ ಸಭೆ ಮುಗಿಯುತ್ತಿದ್ದಂತೆಯೇ, ಶರದ್ ಪವಾರ್ ಅವರು ನೇರವಾಗಿ ಏಕನಾಥ್ ಶಿಂಧೆ ಅವರ ಚೇಂಬರ್ಗೆ ತೆರಳಿದರು ಎನ್ನಲಾಗಿದೆ. ಆ ಸಮಯದಲ್ಲಿ ಡಿಸಿಎಂ ಏಕನಾಥ್ ಶಿಂಧೆ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪವಾರ್ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆಯೇ, ಶಿಂಧೆ ಸಚಿವ ಸಂಪುಟ ಸಭೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಹಿರಿಯ ನಾಯಕ ಪವಾರ್ ಅವರನ್ನು ಶಾಲು ಹೊದಿಸಿ ಹಾಗೂ ಪುಷ್ಪಗುಚ್ಛ ನೀಡಿ ಗೌರವದಿಂದ ಸ್ವಾಗತಿಸಿದರು. ಬಳಿಕ ಸುಮಾರು 15 ನಿಮಿಷಗಳ ಕಾಲ ಅವರಿಬ್ಬರೂ ಮಾತುಕತೆ ನಡೆಸಿದರು. ನಂತರ ಶಿಂಧೆ ಸಚಿವ ಸಂಪುಟ ಸಭೆಗೆ ಹಿಂತಿರುಗಿದರೆ, ಪವಾರ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂವಾದ ನಡೆಸಲು ಇನ್ನು ಸ್ವಲ್ಪ ಸಮಯ ಚೇಂಬರ್ನಲ್ಲೇ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಭೇಟಿಯ ವೇಳೆ ಯಾವ ವಿಷಯಗಳ ಕುರಿತು ಚರ್ಚೆಯಾಯಿತು ಎಂಬುದನ್ನು ಇಬ್ಬರೂ ನಾಯಕರು ಬಹಿರಂಗಪಡಿಸಿಲ್ಲ. ಶಿಂಧೆ ಅವರ ಕಚೇರಿಯು ಇದನ್ನು ಕೇವಲ ಸೌಹಾರ್ದಯುತ ಭೇಟಿ ಎಂದು ಕರೆದಿದೆಯಾದರು, ಪ್ರಸ್ತುತ ಸನ್ನಿವೇಶದಲ್ಲಿ ಈ ಭೇಟಿಯ ಸಮಯವು ತೀವ್ರ ರಾಜಕೀಯ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ವಿಶೇಷವಾಗಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗುವ ಬದಲು ಪವಾರ್ ಅವರು ಶಿಂಧೆಯನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಆರು ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಗೊಂಡ ಬಳಿಕ ಕಾಂಗ್ರೇಸ್, ಎನ್ಸಿಪಿ (ಎಸ್) ಮತ್ತು ಶಿವಸೇನೆ (ಯುಬಿಟಿ) ಒಳಗೊಂಡಿರುವ ಮಹಾವಿಕಾಸ್ ಅಘಾಡಿ ಈಗಾಗಲೇ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ನಡೆದಿರುವ ಈ ಭೇಟಿಯು ಅಘಾಡಿ ಮೈತ್ರಿಕೂಟದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಲಿದ್ದು, ಮುಂಬರುವ ರಾಜಕೀಯ ಸವಾಲುಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಪಾಳೆಯದಲ್ಲಿ ಹೊಸ ಆತಂಕಕ್ಕೆ ಹಾದಿಮಾಡಿಕೊಟ್ಟಿದೆ