ಬೆಂಗಳೂರು: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಜೈಲಿನಲ್ಲಿದ್ದ ಕೈದಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಅಸಭ್ಯವಾಗಿ ವರ್ತಿಸಿರುವ ಆರೋಪವೂ ಕೇಳಿಬಂದಿದ್ದು, ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಅದರಲ್ಲಿ ಕಾಣಿಸಿಕೊಂಡಿರುವ ಮಹಿಳಾ ಪೊಲೀಸ್ ಅಧಿಕಾರಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಖಾಸಗಿ ವಿಡಿಯೋವನ್ನು ಅನುಮತಿ ಇಲ್ಲದೆ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಿರುವ ಅವರು, ಇಬ್ಬರು ರೌಡಿಶೀಟರ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ರೌಡಿಶೀಟರ್ಗಳಾದ ಧರ್ಮ ಹಾಗೂ ಸಾಯಿಕುಮಾರ್ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಧರ್ಮನೊಂದಿಗೆ ಆತ್ಮೀಯ ಪರಿಚಯವಿತ್ತು. ಆತನೊಂದಿಗೆ ನಡೆದ ವಿಡಿಯೋ ಕಾಲ್ ಅನ್ನು ಧರ್ಮನೇ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಅದನ್ನು ಸಾಯಿಕುಮಾರ್ಗೆ ನೀಡಿ ವೈರಲ್ ಮಾಡಿಸಿದ್ದಾನೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಮ್ಮ ಘನತೆಗೆ ಧಕ್ಕೆ ತಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮ, ಸಾಯಿಕುಮಾರ್ ಸೇರಿದಂತೆ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಿಡಿಯೋ ಹೇಗೆ ಚಿತ್ರೀಕರಿಸಲಾಯಿತು? ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರು ಯಾರು? ಜೈಲಿನಲ್ಲಿದ್ದ ಕೈದಿಯ ಬಳಿ ಮೊಬೈಲ್ ಫೋನ್ ಹೇಗೆ ತಲುಪಿತು? ಈ ಘಟನೆಯ ಹಿಂದೆ ಯಾವುದಾದರೂ ಪ್ರಭಾವಿ ವ್ಯಕ್ತಿಗಳು ಅಥವಾ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಗಳು ಇದೀಗ ಮೂಡಿವೆ. ಅಲ್ಲದೆ, ಮಹಿಳಾ ಅಧಿಕಾರಿಯೊಂದಿಗೆ ನಡೆದ ವಿಡಿಯೋ ಕಾಲ್ ಅನ್ನು ಏಕೆ ರೆಕಾರ್ಡ್ ಮಾಡಲಾಯಿತು ಮತ್ತು ನಂತರ ಅದನ್ನು ಏಕೆ ವೈರಲ್ ಮಾಡಲಾಯಿತು ಎಂಬುದೂ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಹೀಗಾಗಿ ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ವಿಡಿಯೋ ವೈರಲ್ ಮಾಡಿದವರ ಉದ್ದೇಶದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕಿದೆ.