ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡಲಾಯಿತು. ಈ ವೇಳೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗೀತೆ ಮುಗಿಯುವವರೆಗೂ ಎದ್ದು ನಿಂತು ಗೌರವ ಸಲ್ಲಿಸಿದರು. ಈ ಘಟನೆ ಇದೀಗ ರಾಷ್ಟ್ರಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ನುಡಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರೂಪುಗೊಂಡ ಬಹುತ್ವದ ಭಾರತದ ಆಶಯವನ್ನು ಗೌರವಿಸಿ, ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಪರಂಪರೆಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ನಿಲುವಿಗೆ ಎನ್‌ಸಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಮೈತ್ರಿಕೂಟದ ಭಾಗವಾಗಿದ್ದೇವೆ ಎಂಬ ಕಾರಣಕ್ಕೆ ತಮ್ಮ ಮೇಲೆ ಯಾವುದೇ ಷರತ್ತುಗಳನ್ನು ಹೇರಲು ಸಾಧ್ಯವಿಲ್ಲ ಎಂದು ಎನ್‌ಸಿ ಮುಖಂಡ ಬಶೀರ್ ಅಹ್ಮದ್ ಹೇಳಿದ್ದಾರೆ. ವಂದೇ ಮಾತರಂನ ಎಷ್ಟು ಚರಣಗಳನ್ನು ಹಾಡಬೇಕು ಎಂಬುದು ಜನರ ಆಯ್ಕೆಯಾಗಿದ್ದು, ಈ ವಿಚಾರದಲ್ಲಿ ಯಾರೂ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವಿವಾದಕ್ಕೆ ಬಿಜೆಪಿ ಕೂಡ ಧುಮುಕಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಸಂಪೂರ್ಣ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮೂಲಭೂತವಾದಿಗಳ ಮುಂದೆ ಶರಣಾಗಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ 21ನೇ ಶತಮಾನದ ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಇದೇ ವೇಳೆ ಬಿಜೆಪಿ ಮುಖಂಡ ಆರ್.ಎಸ್. ಪಠಾನಿಯಾ ಕೂಡ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸಿದ್ದಾರೆ. ಕಣಿವೆಯ ಪ್ರತ್ಯೇಕತಾವಾದಿಗಳಿಂದಲೂ ಈ ರೀತಿಯ ಆಕ್ಷೇಪ ಹಿಂದೆ ಕೇಳಿಬಂದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ವಂದೇ ಮಾತರಂ ವಿಚಾರವು ಕಾಂಗ್ರೆಸ್ ಮತ್ತು ಎನ್‌ಸಿ ನಡುವಿನ ಮೈತ್ರಿಯಲ್ಲಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದು, ಬಿಜೆಪಿ ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ರಾಜಕೀಯ ದಾಳಿ ನಡೆಸಿದೆ.