Search


ಮಗಳ ಮೇಲೆಯೇ ತಂದೆಯ ವಿಕೃತಿ; ದೌರ್ಜನ್ಯಕ್ಕೆ ತಾಯಿಯೂ ಸಾಥ್ ನೀಡಿದ ಆರೋಪ

ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯ ಆಂಜಾರ್ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಕ್ಕೆ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ತಾಯಿ ಕೂಡ ಬಾಲಕಿಯ ನಗ್ನ ಚಿತ್ರಗಳನ್ನು ತೆಗೆದಿರುವುದಾಗಿ ದೂರು ದಾಖಲಾಗಿದೆ. ಸಂತ್ರಸ್ತ ಬಾಲಕಿಯ ದೂರಿನ ಆಧಾರದ ಮೇಲೆ ಪೊಲೀಸರು ದಂಪತಿ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಹಲ್ಲೆ:

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಬಾಲಕಿ ತನ್ನ ನಾಲ್ವರು ಸಹೋದರಿಯರೊಂದಿಗೆ ವಾಸಿಸುತ್ತಿದ್ದಳು. ಸೆಪ್ಟೆಂಬರ್ 14ರಂದು ಮಧ್ಯಾಹ್ನ ಮನೆಯಲ್ಲಿ ಇದ್ದಾಗ ಆಗ್ರಾ ಮೂಲದ ಶಿಸ್ಪಾಲ್ ಅಲಿಯಾಸ್ ಗೋಲು ಎಂಬ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ತಾಯಿ, ಯಾರೊಂದಿಗೆ ಮಾತನಾಡುತ್ತಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಬಾಲಕಿ ಸ್ನೇಹಿತನೊಂದಿಗೆ ಮಾತನಾಡುತ್ತಿರುವುದಾಗಿ ತಿಳಿಸಿದ್ದಾಳೆ.

ಸುಮಾರು ಅರ್ಧ ಗಂಟೆಯ ಬಳಿಕ ಮನೆಗೆ ಬಂದ ತಂದೆಗೆ ತಾಯಿ ಈ ವಿಷಯ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಬಾಲಕಿಯ ಮೇಲೆ ಹಲ್ಲೆ ನಡೆಸಿ ಮನೆಯೊಳಗೆ ಕೂಡಿ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಹಾರ ಮತ್ತು ನೀರು ನೀಡದೆ ಆಕೆಯನ್ನು ಹಿಂಸಿಸಲಾಗಿದ್ದು, ರಾತ್ರಿ ಕೂಡ ಹಲ್ಲೆ ಮುಂದುವರಿದಿದೆ ಎನ್ನಲಾಗಿದೆ.

ಹಲವು ದಿನಗಳ ಕಾಲ ದೌರ್ಜನ್ಯ ಆರೋಪ:
ಬಳಿಕ ತಾಯಿಯ ಸಮ್ಮುಖದಲ್ಲೇ ತಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 29ರಂದು ಕೂಡ ದೌರ್ಜನ್ಯ ಮುಂದುವರಿದಿದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಸೆಪ್ಟೆಂಬರ್ 29ರಂದು ಬಾಲಕಿ ಅದೇ ಕಟ್ಟಡದಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ತೆರಳಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಳು. ಆದರೆ ಪೋಷಕರು ಆಕೆಯಿಂದ ಮೊಬೈಲ್ ಕಸಿದುಕೊಂಡು ಬಲವಂತವಾಗಿ ಮನೆಗೆ ಕರೆತಂದು ಮತ್ತೆ ಕೂಡಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ತಾಯಿಯಿಂದ ನಗ್ನ ಚಿತ್ರ ತೆಗೆದ ಆರೋಪ:
ಅಕ್ಟೋಬರ್ 1ರಂದು ತಂದೆ ಬಾಲಕಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದ ವೇಳೆ ತಾಯಿ ತನ್ನ ಮೊಬೈಲ್‌ನಲ್ಲಿ ಬಾಲಕಿಯ ನಗ್ನ ಚಿತ್ರಗಳನ್ನು ತೆಗೆದಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಕ್ಟೋಬರ್ 2ರಂದು ಬೆಳಗ್ಗೆ ತಂದೆ ಕೆಲಸಕ್ಕೆ ತೆರಳಿದ ಬಳಿಕ ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಚಿಕ್ಕಮ್ಮನ ಮನೆಗೆ ತಲುಪಿದ್ದಾಳೆ. ಅಲ್ಲಿ ನಡೆದ ಘಟನೆಯನ್ನು ವಿವರಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ದೂರು ಸ್ವೀಕರಿಸಿದ ಆಂಜಾರ್ ಪೊಲೀಸರು ಬಾಲಕಿಯ ತಂದೆ ಮತ್ತು ತಾಯಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಸದ್ಯ ಸರ್ಕಾರಿ ಬಾಲಮಂದಿರ ಹಾಗೂ ರಕ್ಷಣಾ ಘಟಕದ ಆರೈಕೆಗೆ ಒಪ್ಪಿಸಲಾಗಿದೆ.

By Ravikumar - 06-10-2026


Ads in Post