ಆಫೀಸ್ ನಲ್ಲಿ ಬಾಸ್ – ಮನೆಯಲ್ಲಿ ಡ್ಯಾಡಿ, ಎಲ್ಲ ಇದ್ದೂ ಪರ್ಫೆಕ್ಟ್ ಮ್ಯಾನ್ ಒಂಟಿ
42 ವರ್ಷದ ವ್ಯಕ್ತಿ ಬಳಿ ಏನೆಲ್ಲ ಇದೆ, ಏನೆಲ್ಲ ಇಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ. ಪೋಸ್ಟ್ ಪ್ರಕಾರ ಚೆನ್ನೈನಲ್ಲಿ ಐಟಿ ವಲಯದಲ್ಲಿ ಹಿರಿಯ ಹುದ್ದೆಯಲ್ಲಿ ಅವರು ಕೆಲ್ಸ ಮಾಡ್ತಿದ್ದಾರೆ. ಅವರ ಹೆಂಡತಿ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 55 ಲಕ್ಷ ಸಂಬಳ ಬರ್ತಿದೆ. ಎಲ್ಲರೂ ಅವರನ್ನು ಪರ್ಫೆಕ್ಟ್ ಜೀವನ ನಡೆಸುತ್ತಿರುವ ವ್ಯಕ್ತಿ ಅಂತ ಭಾವಿಸ್ತಾರೆ. ಸಮಾಜದ ಅನೇಕ ಪುರುಷರಿಗೆ ಇವರು ಮಾದರಿ ವ್ಯಕ್ತಿಯಂತೆ ಕಾಣ್ತಿದ್ದಾರೆ. ಸಮಾಜ ಬಯಸುವ ಎಲ್ಲವನ್ನೂ ಈ ವ್ಯಕ್ತಿ ಪಡೆದಿದ್ದಾರೆ. ಆದ್ರೆ ಒಳಗೊಳಗೆ ನೋವು ತಿನ್ನುತ್ತಿದ್ದಾರೆ.
ಅವರ 20ನೇ ವಯಸ್ಸು ಭಿನ್ನವಾಗಿತ್ತು, ಸಮಯ ಕಳೆಯಲು ಸ್ನೇಹಿತರಿದ್ರು. ಮರೀನಾ ಬೀಚ್ನಿಂದ ಬಸಂತ್ ನಗರ ಬೀಚ್ಗೆ ಒಟ್ಟಿಗೆ ಓಡಾಡ್ತಿದ್ದರು. ರೋಹಿಣಿ, ಉದಯಂ ಮತ್ತು ಕಾಶಿ ಚಿತ್ರಮಂದಿರಗಳಲ್ಲಿ ಒಟ್ಟಿಗೆ ಸಿನಿಮಾ ನೋಡುತ್ತಿದ್ದರು. RX100 ಕಾರಿನಲ್ಲಿ ಮೌಂಟ್ ರಸ್ತೆಯಲ್ಲಿ ಓಡಾಡ್ತಿದ್ದರು. 30 ವರ್ಷದಲ್ಲಿ ಜೀವನ ಭಿನ್ನವಾಗಿತ್ತು. ಕೆಲ್ಸದ ಬಿಡುವಿನಲ್ಲಿ ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಮಾತನಾಡ್ತಿದ್ದರು. ಆದ್ರೆ ಈಗ 42 ವರ್ಷ ಸಂಪೂರ್ಣ ಭಿನ್ನವಾಗಿದೆ ಜೀವನ ಎನ್ನುತ್ತಾರೆ ಅವರು.
40 ರ ದಿನ ಹೀಗಿದೆ
ಈಗ ಫೋನ್ನಲ್ಲಿ ವೈಯಕ್ತಿಕ ಕರೆ ಬರೋದೇ ಅಪರೂಪ. ಒಂದು ಆಫೀಸ್ ನಿಂದ ಇಲ್ಲ ಬ್ಯಾಂಕ್ ಗಳಿಂದ. ಅಪರೂಪಕ್ಕೆ ಹೆಂಡ್ತಿ ಫೋನ್ ಮಾಡಿ ಹಾಲು ತರುವಂತೆ ಹೇಳ್ತಾರೆ. ಈ ಒಂಟಿತನ ವಿಚಿತ್ರವಾಗಿದೆ. ನಾನು ದೈಹಿಕವಾಗಿ ಒಂಟಿಯಲ್ಲ, ಯಂತ್ರವಾಗಿದ್ದೇನೆ ಅಂತ ಅವರು ಬರೆದಿದ್ದಾರೆ. ಆಫೀಸ್ ನಲ್ಲಿ ಎಲ್ಲರೂ ಅವರನ್ನು ಬಾಸ್ ರೀತಿ ನೋಡ್ತಾರೆ. ಎಲ್ಲ ಸಮಸ್ಯೆಗೆ ಇವರ ಬಳಿ ಉತ್ತರ ಇದೆ ಅಂದ್ಕೊಂಡಿದ್ದಾರೆ. ಹೊಸ ಟೆಕ್ನಾಲಜಿ ಜೊತೆ ಹೋರಾಟ ಕಷ್ಟವಾಗ್ತಿದ್ರೂ ಹೇಳಿಕೊಳ್ಳುವಂತಿಲ್ಲ. ಸುಸ್ತಾಗಿದೆ ಅಂತ ಟೀಂಗೆ ಹೇಳೋಹಾಗೂ ಇಲ್ಲ. ಭವಿಷ್ಯದ ಬಗ್ಗೆ ಚಿಂತೆ ಇದ್ರೂ ಎಲ್ಲರ ಮುಂದೆ ಆತ್ಮವಿಶ್ವಾಸ ತೋರಿಸ್ಬೇಕು. ಇನ್ನು ಮನೆಗೆ ಬಂದ್ರೆ ಅಪ್ಪನ ಸ್ಥಾನ ತುಂಬಬೇಕು. ಮನೆಯಲ್ಲಿ ಮಕ್ಕಳು ಪ್ರೀತಿ ತೋರಿಸ್ತಾರೆ ಆದ್ರೆ ಅವರ ಸ್ಕೂಲ್ ಶುಲ್ಕ ತುಂಬೋದು, ವೈ ಫೈ ರಿಪೇರಿ ಇಂಥ ಕೆಲ್ಸ ಮಾಡ್ಬೇಕು. ಮಕ್ಕಳು ಟಿನೇಜರ್ ಆಗಿರೋದ್ರಿಂದ ಅವರ ರೂಮಿನಲ್ಲಿ ಬ್ಯುಸಿ. ಹೆಂಡ್ತಿ ಮಕ್ಕಳನ್ನು ನೋಡಿಕೊಳ್ಳೋದ್ರಲ್ಲಿ ಬ್ಯುಸಿ. ನಾನು ಕುಟುಂಬಕ್ಕೆ ಸೌಕರ್ಯ ಒದಗಿಸುವ ವ್ಯಕ್ತಿ.
ಈಗ ಸ್ನೇಹಿತರಿಲ್ಲ. ಅಪರೂಪಕ್ಕೆ ಸಿಗುವ ಅವರ ಮಾತು, ಮಕ್ಕಳು, ಕೆಲ್ಸದ ಮೇಲಿರುತ್ತೆ. ಮದುವೆ, ಬರ್ತ್ ಡೇ ಗೆ ವಾಟ್ಸ್ ಅಪ್ ನಲ್ಲಿ ವಿಶ್ ಮಾಡಲಷ್ಟೇ ಸ್ನೇಹ ಸೀಮಿತವಾಗಿದೆ. ಆಪೀಸ್ ನಿಂದ ಮನೆಗೆ ಬರುವಾಗ ನಿಧಾನವಾಗಿ ಕಾರು ಓಡಿಸೋ ನಾನು ನನಗಾಗಿ ಸಮಯ ತೆಗೆದಿಡ್ತಿದ್ದೇನೆ. ನನ್ನಿಷ್ಟದ ಹಾಡು ಕೇಳ್ತಾ ಅಪ್ಪನಾಗ್ದೆ, ಬಾಸ್ ಆಗ್ದೆ ನಾನು ನಾನಾಗಿರ್ತೇನೆ. ಈ ವಿಷ್ಯವನ್ನು ಮನೆಯಲ್ಲಿ ಹೇಳಿದ್ರೆ ಅವರು ಅಚ್ಚರಿಗೊಳ್ತಾರೆ. ನಾವೆಲ್ಲ ಇದ್ದೇವಲ್ಲ ಎನ್ನುತ್ತಾರೆ. ಎಲ್ಲರೂ ಇದ್ದು ನಿರ್ಜನ ದ್ವೀಪದಲ್ಲಿ ನಾನಿದ್ದೇನೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳೋದಿಲ್ಲ. ಕುಟುಂಬಕ್ಕೆ ಹಣ, ಭದ್ರತೆ ಒದಗಿಸಿದ್ರೆ ನೀನು ಪರ್ಫೆಕ್ಟ್ ಎನ್ನುವ ಸಮಾಜ, ಈ ಜೀವನದಲ್ಲಿ ಬರುವ ಮೌನ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿಲ್ಲ ಅಂತ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.