Search


ಭಾರತ ಮಾತೆಗೆ ಜೈಕಾರ ಹಾಕಿದ ವಿದ್ಯಾರ್ಥಿಗೆ ಬೆದರಿಕೆ ಹಾಕಿದ ಪ್ರಾಂಶುಪಾಲನ ವಿರುದ್ಧ FIR

ಬೀದರ್: ಸ್ವಾತಂತ್ರ್ಯ ದಿನಾಚರಣೆಯಂದು ಭಾರತ ಮಾತೆಗೆ ಜೈಕಾರ ಹಾಕಿ ವಂದೇ ಮಾತರಂ ಎಂದಿದ್ದ ವಿದ್ಯಾರ್ಥಿಗೆ ಪ್ರಾಂಶುಪಾಲನೊಬ್ಬ ಬೆದರಿಕೆ ಹಾಕಿರುವ ಘಟನೆ ಬೀದರ್‌ನಲ್ಲಿ ವರದಿಯಾಗಿದೆ. ಅಬ್ದುಲ್‌ ಹಕೀಮ್‌ ಎಂಬಾತ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದು, ಇದರ ಅನ್ವಯ ಪ್ರಾಂಶುಪಾಲ ಅಬ್ದುಲ್‌ ವಿರುದ್ಧ ಚಿಟಗುಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್‌ (Bidar) ಜಿಲ್ಲೆಯ ಚಿಟಗುಪ್ಪ ಪಟ್ಟಣದಲ್ಲಿರುವ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಆ.15ರಂದು ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಘಟನೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್ ಎಂಬುವವರ ವಿರುದ್ಧ ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ದೂರು ನೀಡಿದ್ದಾರೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.  ಸ್ವತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಬಳಿಕ ಪಿಯುಸಿ ವಿದ್ಯಾರ್ಥಿ ಸಾಗರ್ ಗೌಳಿ ಎಂಬಾತನಿಂದ ವಂದೇ ಮಾತರಂ, ಭಾರತ್‌ ಮಾತಾಕಿ ಜೈ’ ಘೋಷಣೆ‌ ಕೂಗಿದ್ದ.

ಈ ವೇಳೆ ಪ್ರಾಂಶುಪಾಲರು ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆ ಆಗಿದ್ದರಿಂದ ಇನ್ನೊಮ್ಮೆ ಕೂಗಬೇಡಿ, ಈ ತರಹ ನಮ್ಮ‌ ಕಾಲೇಜಿನಲ್ಲಿ ನಡೆಯುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಕಾಲೇಜಿನಲ್ಲಿ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳು ಒಟ್ಟೊಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಾಂಶುಪಾಲರು ಹಿಂದೂ-ಮುಸ್ಲಿಂ ಅಂತ ತಾರತಮ್ಯ ಮಾಡುತ್ತಿದ್ದಾರೆ. ಈ ಮೂಲಕ ವಿವಿಧ ಸಮುದಾಯಗಳ ವಿದ್ಯಾರ್ಥಿಗಳಲ್ಲಿ ವೈಮನಸ್ಸು ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಖಂಡಿಸಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ.

By Ravikumar - 20-08-2026


Ads in Post