ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿವೆ.
ಮಹಿಳೆಯ ದೂರಿನ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ತೆರಳಿದ್ದ ವೇಳೆ ಅರ್ಜುನ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಮಹಿಳೆಯ ಪತಿ ಮೃತಪಟ್ಟಿರುವ ವಿಚಾರ ತಿಳಿದಿದ್ದ ಅರ್ಜುನ್, ಆಕೆಗೆ ಜೀವನ ನೀಡುವುದಾಗಿ ಭರವಸೆ ನೀಡಿ ಆತ್ಮೀಯವಾಗಿದ್ದ ಎನ್ನಲಾಗಿದೆ.
ನಂತರ ಪ್ರೀತಿಯ ಸಂದರ್ಭದಲ್ಲಿ ತೆಗೆದುಕೊಂಡಿದ್ದ ಮಹಿಳೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಅರ್ಜುನ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. 2024ರ ನವೆಂಬರ್ನಿಂದ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದು, ಹಣ ನೀಡದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಹಂತ ಹಂತವಾಗಿ ಮಹಿಳೆಯಿಂದ ಸುಮಾರು 9 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದ್ದು, ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಆಕೆ ನಿರಾಕರಿಸಿದ್ದಾಳೆ. ಬಳಿಕ ಅರ್ಜುನ್ನ ಕರೆಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಮಹಿಳೆಯ ಮನೆಗೆ ಬಂದಿದ್ದಾನೆ. ಕರೆ ಸ್ವೀಕರಿಸದಿರುವುದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೇರೆಯವರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ ಎಂಬುದು ಮಹಿಳೆಯ ದೂರಿನಲ್ಲಿದೆ.
ಇದಕ್ಕೂ ಕೆಲ ದಿನಗಳ ಹಿಂದೆ ಅರ್ಜುನ್ ಕೂಡ ಮಹಿಳೆ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪದಡಿ ದೂರು ನೀಡಿದ್ದ ಎನ್ನಲಾಗಿದೆ. ಇದೀಗ ಇಬ್ಬರ ದೂರುಗಳ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.