ಮೈಸೂರು: 2028ರ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಿಲ್ಲ ಎಂಬ ಸುಳಿವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಸೋಮವಾರ ವರುಣ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, “ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರ ಅವರಿಗೂ ಆಶೀರ್ವಾದ ಮಾಡಬೇಕು” ಎಂದು ಕ್ಷೇತ್ರದ ಜನರಲ್ಲಿ ಭಾವುಕರಾಗಿ ಮನವಿ ಮಾಡಿದರು.
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ವರುಣ ಕ್ಷೇತ್ರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ದಾಸನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ 150 ವರ್ಷಗಳಲ್ಲೇ ಕಂಡುಬಂದಂತಹ ಭೀಕರ ಬರಗಾಲ ಎದುರಾಗಿದೆ. 220 ತಾಲೂಕುಗಳು ಬರದ ಹೊಡೆತಕ್ಕೆ ಸಿಲುಕಿದ್ದರೂ, ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೆಮ್ಮದಿ ಸಿಕ್ಕಿದೆ ಎಂದು ಹೇಳಿದರು.
ತಾವು ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ರಾಹುಲ್ ಗಾಂಧಿ ಸೂಚಿಸಿದಾಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಹಲವು ಬಾರಿ ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ವರುಣ ಕ್ಷೇತ್ರದ ಜನರ ಆಶೀರ್ವಾದದಿಂದಲೇ ತಾವು ಎರಡು ಬಾರಿ ಮುಖ್ಯಮಂತ್ರಿಯಾಗಲು ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಾಯಿತು ಎಂದರು.
“ವರುಣದ ಜನರೇ ನನ್ನ ರಾಜಕೀಯ ಶ್ರೇಯಸ್ಸಿಗೆ ಕಾರಣ. ಶಾಸಕನಾಗಿರಲಿ, ಇಲ್ಲದಿರಲಿ ಕ್ಷೇತ್ರದ ಸೇವೆಯನ್ನು ಮುಂದುವರಿಸುತ್ತೇನೆ. ವರುಣವನ್ನು ಎಂದಿಗೂ ಮರೆಯುವುದಿಲ್ಲ. ಇನ್ನೂ ಒಂದೂವರೆ ವರ್ಷ ಶಾಸಕನಾಗಿ ಇರುತ್ತೇನೆ. ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರ ಅವರಿಗೂ ಆಶೀರ್ವಾದ ಮಾಡಬೇಕು” ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಇದರ ನಡುವೆ, “ನೀವು 2028ರ ಚುನಾವಣೆಯಲ್ಲೂ ಸ್ಪರ್ಧಿಸಬೇಕು, ನಿಮ್ಮನ್ನು ಗೆಲ್ಲಿಸುತ್ತೇವೆ” ಎಂದು ಕ್ಷೇತ್ರದ ಜನರು ಮನವಿ ಮಾಡಿದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಭಾಷಣ ಮುಗಿಸಿದರು. ಇದರಿಂದ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿತು.