ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಹಿಂದಿನ ಮತದಾರರ ಪಟ್ಟಿಯೊಂದಿಗೆ ವಿವರಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಪ್ರಮುಖ ಮತದಾರರಿಗೆ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಎಲ್.ಕೆ. ಅಡ್ವಾಣಿ, ಅವರ ಪುತ್ರಿ ಪ್ರತಿಭಾ ಹಾಗೂ ಸೊಸೆ ಗೀತಿಕಾ ಅವರ ಹೆಸರುಗಳು 2002ರ SIR ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಆದರೆ ಅಡ್ವಾಣಿ ಅವರ ಪುತ್ರ ಜಯಂತ್ ಅವರ ದಾಖಲೆಗಳು ಪರಿಶೀಲನೆಯಲ್ಲಿ ಸರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮನೀಶ್ ಸಿಸೋಡಿಯಾ, ಅವರ ಪತ್ನಿ ಸೀಮಾ ಹಾಗೂ ಪುತ್ರ ಮೀರ್ ಅವರಿಗೂ ನೋಟಿಸ್ ಜಾರಿಯಾಗಿದೆ. ಸಿಸೋಡಿಯಾ ಅವರ ಕುಟುಂಬಕ್ಕೆ ನೀಡಲಾದ ನೋಟಿಸ್ಗಳಲ್ಲಿ ಹೆಸರು ಹಾಗೂ ಪೋಷಕರ ವಿವರಗಳಿಗೆ ಸಂಬಂಧಿಸಿದ ಹೊಂದಾಣಿಕೆಯ ಕೊರತೆಯನ್ನು ಉಲ್ಲೇಖಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಮತದಾರರು ಸಲ್ಲಿಸಿದ ಎನ್ಯೂಮರೇಷನ್ ಫಾರ್ಮ್ಗಳಲ್ಲಿನ ‘ತಾರ್ಕಿಕ ವ್ಯತ್ಯಾಸಗಳು’ ಅಥವಾ ಹಿಂದಿನ SIR ಪಟ್ಟಿಯೊಂದಿಗೆ ವಿವರಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗದಿರುವುದು ನೋಟಿಸ್ಗೆ ಪ್ರಮುಖ ಕಾರಣವಾಗಿದೆ.
31.63 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್
ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮಾಹಿತಿಯಂತೆ, ಸೆಪ್ಟೆಂಬರ್ 19ರವರೆಗೆ 31,63,930 ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ. ಹಿಂದಿನ SIR ಪಟ್ಟಿಯೊಂದಿಗೆ ದಾಖಲೆಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗದವರು ಹಾಗೂ ಹೆಸರು, ಜನ್ಮ ದಿನಾಂಕ ಸೇರಿದಂತೆ ವಿವಿಧ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದವರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ನೋಟಿಸ್ ಪಡೆದ ಮತದಾರರು ತಮ್ಮ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗೆ ಅಗತ್ಯ ದಾಖಲೆಗಳು ಮತ್ತು ಸ್ಪಷ್ಟೀಕರಣಗಳನ್ನು ಸಲ್ಲಿಸಬೇಕಿದೆ. ದಾವೆ ಮತ್ತು ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 30ರಂದು ಮುಕ್ತಾಯವಾಗಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 4ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ. ಅಧಿಕಾರಿಗಳ ಪ್ರಕಾರ, ನೋಟಿಸ್ ಜಾರಿಯಾಗಿರುವುದೇ ಮತದಾರರ ಹೆಸರು ಅಂತಿಮ ಪಟ್ಟಿಯಿಂದ ಶಾಶ್ವತವಾಗಿ ಹೊರಗುಳಿದಿದೆ ಎಂದರ್ಥವಲ್ಲ. ಅಗತ್ಯ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆಯ ಬಳಿಕ ಅರ್ಹ ಮತದಾರರ ವಿವರಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ಮುಂದುವರಿಯಲಿದೆ.