Search


ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

ಬೆಂಗಳೂರು: ಧಣಿವರಿಯದ ನಾಯಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಕೆಲವು ನಾಯಕರ ಪೈಕಿ ಸನ್ಮಾನ್ಯ ಹೆಚ್. ಡಿ ದೇವೇಗೌಡರು ಕೂಡ ಒಬ್ಬರು. ವಯಸ್ಸು 94 ಆದರೂ, ದೇಹ ವಿಶ್ರಾಂತಿ ಬಯಸಿದರು, ಚಿರ ಯುವಕನ ಹಾಗೆ ಸಂಸತ್ತಿನಲ್ಲಿ ಅಬ್ಬರಿಸುವ ದೇವೇಗೌಡರು ಸದಾ ಕಾಲ ಜನಪರ ಕಾಳಜಿಯೊಂದಿಗೆ ಕೆಲಸ ಮಾಡಿದ್ದಾರೆ. ಅಂತಹ ದೇವೇಗೌಡರು ಇಂದು 94ನೇ ವಸಂತಕ್ಕೆ ಕಾಲಿಟ್ಟಿದ್ದು. ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ಶುಭಕೋರಿದ ಪ್ರಧಾನಿ ಮೋದಿ..!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಎಕ್ಸ್‌'ಖಾತೆಯಲ್ಲಿ ಹೆಚ್.ಡಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಹೆಚ್.ಡಿ ದೇವೇಗೌಡ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಾರ್ವಜನಿಕ ಜೀವನದಲ್ಲಿ ತಮ್ಮ ದೀರ್ಘಕಾಲದ ಸೇವೆಯ ಮೂಲಕ ಅವರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅವರ ಆಳವಾದ ಅರಿವು ಮತ್ತು ಹಿಂದುಳಿದವರ ಸೇವೆಯ ಮೇಲಿನ ಬದ್ಧತೆ ಎಲ್ಲರಿಗೂ ಪರಿಚಿತವಾಗಿದೆ. ಅವರು ದೀರ್ಘಾಯುಷಿ ಹಾಗೂ ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ವಿಶೇಷವಾಗಿ ಶುಭಹಾರೈಸಿದ್ದಾರೆ. ಇನ್ನು ಗೃಹ ಸಚಿವರ ಅಮಿತ್ ಶಾ ವೈಯಕ್ತಿಕವಾಗಿ ಕರೆ ಮಾಡಿ ದೇವೇಗೌಡರಿಗೆ ಶುಭಾಶಯ ತಿಳಿಸಿದ್ದು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ ಎಂದರು.

ಗಣ್ಯರಿಂದ ಶುಭಹಾರೈಕೆ – ಎಕ್ಸ್‌ ಪೋಸ್ಟೈಲ್ಲಿ ಏನಿದೆ?

ಹೆಚ್.ಡಿ ಕುಮಾರಸ್ವಾಮಿ

ಹೆಚ್.ಡಿ ಕುಮಾರಸ್ವಾಮಿ ಅವರು ತಂದೆಯೊಂದಿಗಿನ ಪೋಟೋ ಹಂಚಿಕೊಂಡು, ನನ್ನ ಪೂಜ್ಯ ತಂದೆಯವರು, ರಾಷ್ಟ್ರದ ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ ಭಕ್ತಿಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ಹೋರಾಟ, ಸಂಘರ್ಷ, ತ್ಯಾಗ. ಸಮರ್ಪಣಾ ಭಾವದಿಂದ ರಾಜಕೀಯದ ಉತ್ತುಂಗಕ್ಕೆ ಏರಿದ ಮಣ್ಣಿನಮಗನ ಹೆಜ್ಜೆಗಳು ಅನುಕರಣೀಯ. ಅವರು ತಮ್ಮ ಬದುಕಿನ ಪ್ರತೀಕ್ಷಣವನ್ನು ಜನಸೇವೆಗೆ ಮೀಸಲಿಟ್ಟರು. 94ರ ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್ಷದ ಹಾದಿಯನ್ನು ಸವೆಸುತ್ತಿದ್ದಾರೆ. ಅವರ ದಾರಿ ತಲೆತಲೆಮಾರಿಗೂ ಮಾದರಿ. ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಎಕ್ಷ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಶುಭಕೋರಿದ್ದು, ಮಾಜಿ ಪ್ರಧಾನಿಗಳು, ಹಿರಿಯ ರಾಜಕೀಯ ನಾಯಕರು ಆಗಿರುವ ಹೆಚ್‌.ಡಿ ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು. ನಾಡಿನ ಜನರ ಸೇವೆಯನ್ನು ಇನ್ನಷ್ಟು ಕಾಲ ನಡೆಸುವಂತೆ ಭಗವಂತ ನಿಮಗೆ ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ಪ್ರಧಾನಿಗಳ ಹುಟ್ಟುಹಬ್ಬಕ್ಕೆ ವಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವರು ಶುಭಕೋರಿದ್ದಾರೆ. 

By News Desk - 18-05-2026


Ads in Post