Search


ಇನ್ಮುಂದೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ 10 ವರ್ಷ ಜೈಲು; ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!

ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ದೇಶದ್ಯಾಂತ ಹಲವೆಡೆ ಪ್ರತಿಭಟನೆಗಳು ಜರುಗುತ್ತಿವೆ. ಇದೀಗ ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆ–2024ಕ್ಕೆ ಮಹತ್ವದ ತಿದ್ದುಪಡಿ ತರಲು ಮುಂದಾಗಿದೆ. ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಇತ್ತೀಚಿನ ದಿನಗಳಲ್ಲಿ ವಿವಿಧ ನೇಮಕಾತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿರುವ ಈ ಅಕ್ರಮಗಳನ್ನು ತಡೆಯಲು ಈಗಿನ ಕಾನೂನಿಗಿಂತಲೂ ಕಠಿಣ ಶಿಕ್ಷೆ ಹಾಗೂ ವೇಗದ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

ಪ್ರಸ್ತುತ ಜಾರಿಯಲ್ಲಿರುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ರ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಆದರೆ ಹೊಸ ತಿದ್ದುಪಡಿ ಜಾರಿಗೆ ಬಂದರೆ ಶಿಕ್ಷೆಯ ಪ್ರಮಾಣವನ್ನು 5 ರಿಂದ 10 ವರ್ಷಗಳವರೆಗೆ ಹೆಚ್ಚಿಸಲಾಗುತ್ತದೆ. ಜೊತೆಗೆ ದಂಡದ ಮೊತ್ತವನ್ನು ₹1 ಕೋಟಿವರೆಗೆ ಏರಿಸುವ ಪ್ರಸ್ತಾವವೂ ಇದೆ.

ಇದರ ಜೊತೆಗೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯನ್ನು ವರ್ಷಗಟ್ಟಲೆ ಎಳೆಯುವುದನ್ನು ತಪ್ಪಿಸಲು ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆಯೂ ಸರ್ಕಾರದ ಮುಂದಿದೆ. ಇದರಿಂದ ಪ್ರಕರಣಗಳ ತ್ವರಿತ ವಿಚಾರಣೆ ನಡೆಯಲಿದ್ದು, ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ನಡೆಸುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ತೋರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವಿದ್ಯಾರ್ಥಿಗಳ ಶ್ರಮ ಮತ್ತು ಭವಿಷ್ಯವನ್ನು ಹಾಳು ಮಾಡುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ತಿದ್ದುಪಡಿ ಕ್ರಮವನ್ನು ಮುಂದಿಟ್ಟಿರುವುದು ಮಹತ್ವ ಪಡೆದಿದೆ.

ಹೊಸ ಕಾನೂನು ಜಾರಿಯಾದರೆ ಪ್ರಶ್ನೆಪತ್ರಿಕೆ ಸೋರಿಕೆ ಜಾಲದಲ್ಲಿ ತೊಡಗಿರುವ ವ್ಯಕ್ತಿಗಳು, ಸಂಘಟಿತ ಗುಂಪುಗಳು ಹಾಗೂ ಅಕ್ರಮಕ್ಕೆ ನೆರವಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೆಚ್ಚಿನ ಬಲ ಸಿಗಲಿದೆ. ಸರ್ಕಾರದ ಈ ಕ್ರಮದಿಂದ ದೇಶದ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಹೆಚ್ಚುವುದರ ಜೊತೆಗೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಹಿತಾಸಕ್ತಿಯೂ ಮತ್ತಷ್ಟು ರಕ್ಷಣೆ ಪಡೆಯಲಿದೆ..

By Ravikumar - 24-07-2026


Ads in Post