Search


E20 ಪೆಟ್ರೋಲ್ ಬಗ್ಗೆ ಗಡ್ಕರಿ ಮಹತ್ವದ ಮಾಹಿತಿ; ಹಳೆಯ ವಾಹನ ಸವಾರರಿಗೆ ಎಚ್ಚರಿಕೆ

E20 ಪೆಟ್ರೋಲ್ ಬಗ್ಗೆ ಆತಂಕದಲ್ಲಿರುವ ಹಳೆಯ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಅವರು, 2005ರಿಂದ 2016ರ ಅವಧಿಯಲ್ಲಿ ತಯಾರಾದ ಕೆಲವು BS-III ವಾಹನಗಳಲ್ಲಿ E20 ಪೆಟ್ರೋಲ್ ಬಳಕೆಯಿಂದ ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಎದುರಾಗಬಹುದು ಎಂದು ತಿಳಿಸಿದ್ದಾರೆ.

ಆದರೆ ಇದರಿಂದ ಎಂಜಿನ್‌ಗೆ ಯಾವುದೇ ಗಂಭೀರ ಹಾನಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಡಿಯನ್ ಆಯಿಲ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP), SIAM ಹಾಗೂ ARAI ನಡೆಸಿದ ಪರೀಕ್ಷೆಗಳಲ್ಲಿ E20 ಪೆಟ್ರೋಲ್ ಬಳಕೆಯಿಂದ ಎಂಜಿನ್ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸಮಸ್ಯೆ ಕಂಡುಬಂದಿಲ್ಲ. ಹೀಗಾಗಿ ಎಂಜಿನ್‌ನಲ್ಲಿ ವಿಶೇಷ ಬದಲಾವಣೆ ಮಾಡುವ ಅಗತ್ಯವೂ ಇಲ್ಲ ಎಂದು ಅಧ್ಯಯನಗಳು ತಿಳಿಸಿವೆ.

ಆದರೆ ಹಳೆಯ BS-III ವಾಹನಗಳಲ್ಲಿ ಬಳಸಿರುವ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳು ಎಥೆನಾಲ್ ಮಿಶ್ರಿತ ಇಂಧನದ ಪರಿಣಾಮದಿಂದ ಬೇಗ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ವಾಹನದ ನಿಯಮಿತ ಸರ್ವಿಸ್ ವೇಳೆ ಅವುಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಬದಲಾಯಿಸಿಕೊಳ್ಳುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದ್ದಾರೆ.

ಇದೇ ವೇಳೆ, E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂಬ ಆತಂಕಕ್ಕೂ ಗಡ್ಕರಿ ಉತ್ತರಿಸಿದ್ದಾರೆ. ವಾಹನದ ಮೈಲೇಜ್ ಕೇವಲ ಇಂಧನದ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ರಸ್ತೆ ಪರಿಸ್ಥಿತಿ, ವಾಹನದ ನಿರ್ವಹಣೆ, ಟೈರ್ ಗಾಳಿಯ ಒತ್ತಡ, ಟ್ರಾಫಿಕ್ ಹಾಗೂ ಚಾಲನಾ ಶೈಲಿ ಸೇರಿದಂತೆ ಹಲವು ಅಂಶಗಳು ಮೈಲೇಜ್ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದ್ದಾರೆ.

By Ravikumar - 30-07-2026


Ads in Post