IPL 2026 ಫೈನಲ್ ಪಂದ್ಯದ ಬಗ್ಗೆ ಮಾಜಿ ದಿಗ್ಗಜ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ಗುಜರಾತ್ ತಂಡಕ್ಕೆ ಅನ್ಯಾಯವಾಗಿದೆ, ಫೈನಲ್ ಪಂದ್ಯವನ್ನ ಒಂದು ದಿನ ಮುಂದೂಡಬೇಕಿತ್ತು ಎಂದು ಹೇಳಿದ್ದಾರೆ. ಸುನೀಲ್ ಗವಾಸ್ಕರ್ ಈ ರೀತಿ ಹೇಳಲು ಕಾರಣವಾದರು ಏನು, ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ತಂಡಕ್ಕೆ ಆದ ಅನ್ಯಾಯವಾದರು ಏನು ಎಂಬುದನ್ನ ನೋಡೋಣ ಬನ್ನಿ.
ಗವಾಸ್ಕರ್ ಅಸಮಾಧಾನಕ್ಕೆ ಕಾರಣವೇನು?
ಕ್ವಾಲಿಫೈಯರ್ 1ರಲ್ಲಿ ಆರ್ಸಿಬಿ ವಿರುದ್ದ ಸೋತಿದ್ದ ಗುಜರಾತ್ ತಂಡ, ನ್ಯೂ ಚಂಡೀಗಢ್ನಲ್ಲಿ ರಾಜಸ್ಥಾನದ ವಿರುದ್ದ ಕ್ವಾಲಿಫೈಯರ್ 2 ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಜಯಗಳಿಸಿದ ಗುಜರಾತ್ ಟೈಟಾನ್ಸ್, ಫೈನಲ್ ಪಂದ್ಯಕ್ಕಾಗಿ ಅಹಮದ್ಬಾದ್ಗೆ ಹೊರಟು ನಿಂತಿತ್ತು. ಆದರೆ ಶನಿವಾರ ರಾಜಸ್ಥಾನ್ ಸುತ್ತ ಮುತ್ತ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಚಂಡಮಾರುತದ ಕಾರಣ ಗುಜರಾತ್ ಟೈಟಾನ್ಸ್ ತಂಡದ ಚಾರ್ಟರ್ಡ್ ವಿಮಾನ ಟೇಕ್ ಆಫ್ ಆಗಲು ವಿಳಂಬವಾಗಿತ್ತು. ಇದರಿಂದ ಆಟಗಾರರು ಮಧ್ಯಾಹ್ನದಿಂದ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಗಿ ಬಂತು.
ಅಲ್ಲದೆ ಆಟಗಾರರು ಅಹಮದಾಬಾದ್ನ ಬಂದು ತಲುಪಿದ್ದು ತಡರಾತ್ರಿ 10.45 ಕ್ಕೆ. ಅಲ್ಲಿದೆ ಟೀಮ್ ಹೊಟೇಲ್ಗೆ ತಲುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಯಾಗಿತ್ತು. ಅಂದರೆ ಫೈನಲ್ ಪಂದ್ಯಕ್ಕೂ ಕೇವಲ 20 ಗಂಟೆಗಳ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಆಟಗಾರರು ಆಗಮಿಸಿದ್ದರು.
ಇಷ್ಟೊಂದು ಕಡಿಮೆ ಅವಧಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ವಿಶ್ರಾಂತಿ ಪಡೆದು, ಫೈನಲ್ ಪಂದ್ಯಕ್ಕೆ ಸಜ್ಜಾಗಬೇಕಿತ್ತು. ಈ ವೇಳೆ ಗುಜರಾತ್ ಆಟಗಾರರಿಗೆ ಪ್ರಾಕ್ಟಿಸ್ ಮಾಡಲು ಅವಕಾಶ ಸಿಕ್ಕಿರಲಿಲ್ಲ.
ಈ ವಿಷಯದ ಕುರಿತು ಸುನೀಲ್ ಗವಾಸ್ಕರ್ ಮಾತನಾಡಿದ್ದು " ಅತ್ತ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇದ್ದರೂ ಅದನ್ನು ಬಳಸಿಯಾದರೂ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಶ್ರಾಂತಿಗೆ ಅನುವು ಮಾಡಿಕೊಡಬಹುದಿತ್ತು. ಸೋಮವಾರಕ್ಕೆ ಫೈನಲ್ ಪಂದ್ಯವನ್ನು ಮುಂದೂಡಿದ್ದರೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಸಂಪೂರ್ಣ ವಿಶ್ರಾಂತಿ ಪಡೆದು ಅಂತಿಮ ಮ್ಯಾಚ್ಗೆ ಸಜ್ಜಾಗುತ್ತಿದ್ದರು.
ಇದರಿಂದ ಅಭಿಮಾನಿಗಳಿಗೆ ಮತ್ತಷ್ಟು ರೋಚಕ ಹಾಗೂ ಸಮಬಲದ ಹೋರಾಟದ ಫೈನಲ್ ಪಂದ್ಯವನ್ನು ನೋಡುವ ಅವಕಾಶ ದೊರೆಯುತ್ತಿತ್ತು. ಆದರೆ ಬಿಸಿಸಿಐ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರಯಾಣದ ದಣಿವು ಹಾಗೂ ಮಾನಸಿಕ ಸ್ಥಿತಿಯನ್ನೇ ಪರಿಗಣಿಸಿಲ್ಲ. ಅಹಮದಾಬಾದ್ಗೆ ಬಂದ 20 ಗಂಟೆಯೊಳಗೆ ಫೈನಲ್ ಮ್ಯಾಚ್ ಆಡಿಸಿದ್ದಾರೆ. ಇದು ನಿಜಕ್ಕೂ ಅನ್ಯಾಯ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.