Search


ಮೋದಿ ಜೊತೆ ಮೆಲೋನಿ ಸೆಲ್ಫಿ; ಸ್ನೇಹಿತನಿಗೆ ಆತ್ಮೀಯ ಸ್ವಾಗತ ಕೋರಿದ ಇಟಲಿ ಪ್ರಧಾನಿ

ರೋಮ್‌ : ಪ್ರಧಾನಿ ನರೇಂದ್ರ ಮೋದಿ ಪಂಚರಾಷ್ಟ್ರಗಳ ಪ್ರವಾಸದ ಕೊನೆಯ ರಾಷ್ಟ್ರವಾದ ಇಟಲಿಗೆ ಭೇಟಿ ನೀಡಿದ್ದು, ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ತಮ್ಮ ಆತ್ಮೀಯ ಸ್ನೇಹಿತ ಮೋದಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ಕುರಿತಾದ ಸೆಲ್ಫಿಯನ್ನ ಮೆಲೋನಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು,  “ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ” ಎಂಬ ಹೃದಯಸ್ಪರ್ಶಿ ಶೀರ್ಷಿಕೆ ನೀಡಿದ್ದಾರೆ.

ಜಾಗತಿಕ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳ ನಡುವೆ, ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಪಂಚ ರಾಷ್ಟ್ರಗಳ ಭೇಟಿ ಮಹತ್ವ ಪಡೆದುಕೊಂಡಿದೆ. ಈಗಾಗಲೇ 4 ರಾಷ್ಟ್ರಗಳ ಭೇಟಿ ಮುಗಿಸಿರುವ ಮೋದಿ, ಕಡೆಯದಾಗಿ ಇಟಲಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ಸುದೀರ್ಘ ಯುರೋಪಿಯನ್ ಪ್ರವಾಸದ ಕೊನೆಯ ಮತ್ತು ಅತ್ಯಂತ ಪ್ರಮುಖ ಘಟ್ಟವನ್ನು ತಲುಪಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವಿಶೇಷ ಆಹ್ವಾನದ ಮೇರೆಗೆ ನಡೆದಿರುವ ಈ ಪ್ರವಾಸವು, ಪ್ರಧಾನಿ ಮೋದಿಯವರು ಇಟಲಿಗೆ ನೀಡುತ್ತಿರುವ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಯಾಗಿದೆ.

ರೋಮ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಯನ್ನುಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ಅವರು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಿದರು. ಇದಾದ ನಂತರ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಂದ ಪ್ರಧಾನಿ ಮೋದಿಗೆ ಆತ್ಮೀಯ ಮತ್ತು ಅದ್ಧೂರಿ ಸ್ವಾಗತ ದೊರೆಯಿತು.

ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುವ ಈ ಇಬ್ಬರು ಜಾಗತಿಕ ನಾಯಕರ ಸ್ನೇಹ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭೇಟಿಯ ಬೆನ್ನಲ್ಲೇ ಪ್ರಧಾನಿ ಮೆಲೋನಿ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ಹೊಸ ಮತ್ತು ಅದ್ಭುತವಾದ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ” ಎಂಬ ಹೃದಯಸ್ಪರ್ಶಿ ಶೀರ್ಷಿಕೆ ನೀಡಿದ್ದು, ಈ ಫೋಟೋ ಇಂಟರ್ನೆಟ್‌ನಲ್ಲಿ ಜಾಗತಿಕ ಮಟ್ಟದಲ್ಲಿ ತ್ವರಿತವಾಗಿ ವೈರಲ್ ಆಗಿದೆ. ಐದು ರಾಷ್ಟ್ರಗಳ ಮಹತ್ವದ ಪ್ರವಾಸ ಪ್ರಧಾನಿ ಮೋದಿ ಅವರು ಮೇ 15 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ತಮ್ಮ ಈ ರಾಜತಾಂತ್ರಿಕ ಪ್ರವಾಸವನ್ನು ಆರಂಭಿಸಿದ್ದರು. ಯುಎಇ ಭೇಟಿಯ ನಂತರ ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ನಾರ್ವೆ ದೇಶಗಳಿಗೆ ಭೇಟಿ ನೀಡಿ ಜಾಗತಿಕ ಬಾಂಧವ್ಯ ವೃದ್ಧಿಸಿದ ಮೋದಿ, ಈಗ ತಮ್ಮ ಪ್ರವಾಸದ ಅಂತಿಮ ನಿಲ್ದಾಣವಾಗಿ ಇಟಲಿಗೆ ಬಂದಿದ್ದಾರೆ. ಈ ಮುನ್ನ ಜೂನ್ 2024 ರಲ್ಲಿ ಜಿ-7 (G-7) ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಕೊನೆಯ ಬಾರಿಗೆ ಇಟಲಿಗೆ ಭೇಟಿ ನೀಡಿದ್ದರು.

By thebigbulletin.com - 20-05-2026


Ads in Post