Search


ಸರತಿ ಸಾಲಿಗೆ ಗುಡ್‌ಬೈ: ಮನೆಯಿಂದಲೇ ಇ-ಕೆವೈಸಿ, ‘ಅನ್ನಸೇವೆ’ ಆಪ್ ಲಾಂಚ್

ಬೆಂಗಳೂರು: ಪಡಿತರ ಚೀಟಿದಾರರಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನಸೇವೆ’ ಎಂಬ ಹೊಸ ಆಪ್ ಬಿಡುಗಡೆ ಮಾಡಿದೆ. ಇನ್ನು ಮುಂದೆ ಫಲಾನುಭವಿಗಳು ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.

ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಿಸಲು ಪಡಿತರ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಆಪ್‌ ಪರಿಚಯಿಸಲಾಗಿದ್ದು, ಸದ್ಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸೇವೆ ಆರಂಭಿಸಲಾಗಿದೆ.

ಮುಂದಿನ 20 ದಿನಗಳ ಬಳಿಕ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ‘ಅನ್ನಸೇವೆ’ ಆಪ್‌ ಸೇವೆ ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಆಪ್‌ ಮೂಲಕ ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಈ ಕುರಿತು ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಇ-ಕೆವೈಸಿ ಅಪ್‌ಡೇಟ್ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆದರೆ ಸರ್ವರ್ ಸಮಸ್ಯೆ ಎದುರಾಗಿತ್ತು. ಇದೀಗ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದ್ದು, ರಾಜ್ಯದಲ್ಲಿರುವ ಸುಮಾರು ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸೇವೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

By Ravikumar - 01-10-2026


Ads in Post