ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಬೆಂಗಳೂರಿನ ಜನತೆಗೆ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆ ಕೊಂಚ ನೆಮ್ಮದಿ ನೀಡಿದೆ. ನಗರದ ಹಲವು ಪ್ರದೇಶಗಳಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಭಾನುವಾರ ಬೆಳಗ್ಗೆಯೂ ಕೆಲವೆಡೆ ಮಳೆ ಮುಂದುವರಿದಿದೆ. ಶಾಂತಿನಗರ, ವಸಂತನಗರ, ಮೆಜೆಸ್ಟಿಕ್, ಕೋರಮಂಗಲ, ಸಿಟಿ ಮಾರ್ಕೆಟ್, ಮಲ್ಲೇಶ್ವರಂ, ಯಶವಂತಪುರ, ಜಯನಗರ, ವಿಜಯನಗರ, ಜೆ.ಪಿ. ನಗರ, ರಾಜಾಜಿನಗರ, ನಾಗರಬಾವಿ, ಹೆಬ್ಬಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಕೆಲವೆಡೆ ಸಂಚಾರ ನಿಧಾನಗೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ವಾತಾವರಣ ಕಂಡುಬರುತ್ತಿದೆ. ಬೆಂಗಳೂರಿನಲ್ಲಿಯೂ ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಭಾನುವಾರ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಕೆಲವೆಡೆ ಸಾಧಾರಣ ತುಂತುರು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಕನಿಷ್ಠ ತಾಪಮಾನ ಸುಮಾರು 21 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ನಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಬಿಸಿಲಿನ ನಡುವೆ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ವಾಯುಭಾರ ಕುಸಿತ.. ಉತ್ತಮ ಮಳೆ ಮುನ್ಸೂಚನೆ..!
ಇನ್ನು ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಹವಾಮಾನ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ಉತ್ತರ ಅಂಡಮಾನ್ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿದ್ದು, ಬಳಿಕ ಅದು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸುವ ನಿರೀಕ್ಷೆಯಿದೆ. ಸೋಮವಾರದ ವೇಳೆಗೆ ಡಿಪ್ರೆಶನ್ ಆಗಿ ಹಾಗೂ ಮಂಗಳವಾರದ ವೇಳೆಗೆ ಡೀಪ್ ಡಿಪ್ರೆಶನ್ ಆಗಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಇದರ ಪರಿಣಾಮ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಈ ಹವಾಮಾನ ವ್ಯವಸ್ಥೆಯಿಂದ ರಾಜ್ಯದ ಒಳನಾಡು ಪ್ರದೇಶಗಳತ್ತ ಹೆಚ್ಚಿನ ತೇವಾಂಶ ಸೆಳೆಯುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಬಹುದು. ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶ ಕರಾವಳಿ ಭಾಗದತ್ತ ವ್ಯವಸ್ಥೆ ಸಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳ ಜತೆಗೆ ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.