Search


ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿದ ಸರ್ಕಾರ

ಕೋಲ್ಕತ್ತಾ, : ಪಶ್ಚಿಮ ಬಂಗಳಾದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಹೊಸ ಆದೇಶ ಹೊರಡಿಸಿದ್ದು. ಇನ್ಮುಂದೆ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಮದರಸಾ ಶಿಕ್ಷಣ ನಿರ್ದೇಶನಾಲಯ ಈ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರಬೇಕು ಎಂದು ಸೂಚಿಸಿದೆ.

ಕಳೆದ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಯನ್ನ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಶಾಲಾ-ಕಾಲೇಜುಗಳ ಪ್ರಾರ್ಥನೆ ಸಮಯದಲ್ಲಿ ಹಾಡಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಮುಸ್ಲಿಂ ಸಮುದಾಯದಿಂದ ವಿರೋಧವು ಕೇಳಿಬಂದಿತ್ತು. ಆದರೆ ಇದೀಗ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಸುವೇಂದು ಸರ್ಕಾರ ಮದರಸಾಗಳಲ್ಲಿಯೂ ವಂದೇ ಮಾತರಂ ಹಾಡಬೇಕು ಎಂದು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಖುದಿರಾಮ್ ತುಡು ಬಂಗಾಳದಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಸಂತಾಲಿ ಭಾಷೆಯಲ್ಲಿ ಬೋಧನೆ ನಡೆಸಲಾಗುತ್ತದೆ. ಆ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿದ್ದರೆ, ಮದರಸಾಗಳಲ್ಲಿ ಅದನ್ನು ಜಾರಿಗೆ ತರಲು ಕೂಡ ಯಾವುದೇ ಸಮಸ್ಯೆ ಇರಬಾರದು ಎಂದಿದ್ದಾರೆ.

ಜೊತೆಗೆ ಮದರಸಾ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಆದೇಶದಲ್ಲಿ, ಹಿಂದಿನ ಎಲ್ಲಾ ಆದೇಶಗಳು ಮತ್ತು ಅಭ್ಯಾಸಗಳನ್ನು ರದ್ದುಗೊಳಿಸಿ, ರಾಜ್ಯದ ಎಲ್ಲಾ ಸರ್ಕಾರಿ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳು, ಎಂಎಸ್‌ಕೆ ಮತ್ತು ಎಸ್‌ಎಸ್‌ಕೆಗಳಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ಪ್ರಾರ್ಥನಾ ಸಭೆಯಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದೆ.

ಈ ನಿರ್ಧಾರದ ಅನುಷ್ಠಾನದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಇನ್ನೂ ಹೊರಡಿಸಲಾಗಿಲ್ಲ. ಇದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಯಾವ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂಬುದನ್ನು ಸಹ ಸ್ಪಷ್ಟಪಡಿಸಲಾಗಿಲ್ಲ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
 

By News Desk - 22-05-2026


Ads in Post