ನರಸೀಪುರ: ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ನಡೆಸುವ ವಿಚಾರವಾಗಿ ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ನೀಡಿದ್ದ ಎಚ್ಚರಿಕೆಯ ನಡುವೆಯೇ ಹಿಂದೂ ಮಹಾಸಭಾ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಶುಕ್ರವಾರ ಲಿಂಕ್ ರಸ್ತೆಯಲ್ಲಿ ಬೃಹತ್ ಗಣಪತಿ ಶೋಭಾಯಾತ್ರೆ ನಡೆಸಿದರು. ಬಿಗಿ ಪೊಲೀಸ್ ಭದ್ರತೆ ಮತ್ತು ಆತಂಕದ ವಾತಾವರಣದ ನಡುವೆಯೂ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಮಸೀದಿ ಮುಂಭಾಗ ಪಟಾಕಿ ಸಿಡಿಸಬಾರದು ಎಂಬ ಇನ್ಸ್ಪೆಕ್ಟರ್ ಧನಂಜಯ್ ಅವರ ಎಚ್ಚರಿಕೆಯನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿದರು. ಮೆರವಣಿಗೆಯ ವೇಳೆ ಮಸೀದಿ ಮುಂಭಾಗ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಸಾವಿರಾರು ಹಿಂದೂ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಪ್ರಮುಖ ನಾಯಕರ ಗೈರಿನ ನಡುವೆಯೂ ಮೆರವಣಿಗೆ ನಡೆಸಲಾಯಿತು.
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಿಂದೂ ಧ್ವಜ ಬೀಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಯುವಕರೊಂದಿಗೆ ಸೇರಿ ಕುಣಿದು ಸಂಭ್ರಮಿಸಿದ ಅವರು, ಬಳಿಕ ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ವಾಗ್ದಾಳಿ ನಡೆಸಿದರು. ಪೊಲೀಸರು ಮತ್ತು ಪೊಲೀಸ್ ಇಲಾಖೆಯ ಬಗ್ಗೆ ಗೌರವವಿದೆ, ಆದರೆ ಧನಂಜಯ್ ಅವರಂತಹ ಅಧಿಕಾರಿಗಳ ಬಗ್ಗೆ ಗೌರವವಿಲ್ಲ ಎಂದು ಅವರು ಹೇಳಿಕೆ ನೀಡಿದರು.
ಇದೇ ವೇಳೆ, ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ಧನಂಜಯ್ ಅವರ ವಿರುದ್ಧ ಲೆಕ್ಕ ಚುಕ್ತಾ ಮಾಡುವುದಾಗಿ ಪ್ರತಾಪ್ ಸಿಂಹ ಹೇಳಿಕೆ ನೀಡಿದರು. ಮಸೀದಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದರೆ, ಈಗ ತಾವು ಅಲ್ಲಿಗೇ ಬಂದಿರುವುದಾಗಿ ಅವರು ಹೇಳುವ ಮೂಲಕ ಇನ್ಸ್ಪೆಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಲಿಂಕ್ ರಸ್ತೆಯ ಮಸೀದಿ ಮುಂಭಾಗದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೆಎಸ್ಆರ್ಪಿ ತುಕಡಿಗಳು, ಅರೆಸೇನಾ ಪಡೆ ಹಾಗೂ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕು ರಿಸರ್ವ್ ಪೊಲೀಸ್ ವಾಹನಗಳನ್ನು ಸಹ ಸ್ಥಳದಲ್ಲಿ ಇರಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಮಸೀದಿಗೆ ನೇರವಾಗಿ ಕಾಣದಂತೆ ರಿಸರ್ವ್ ವಾಹನಗಳನ್ನು ನಿಲ್ಲಿಸಲಾಗಿತ್ತು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ದಂಡಿ ಅವರು ಸ್ಥಳದಲ್ಲೇ ಬೀಡುಬಿಟ್ಟು ಭದ್ರತಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಿದರು.