ತಿರುಮಲ: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಹಾರ್ದಿಕ್ಕಾ ದೇವರಿಗೆ ತಮ್ಮ ಮುಡಿಯನ್ನ ಅರ್ಪಿಸಿದ್ದಾರೆ, ಅವರ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ತಿರುಮಲಕ್ಕೆ ತೆರಳಿದ್ದರು. ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಹಾರ್ದಿಕ್ ಅವರು ವಿಶೇಷ ಪೂಜೆ ಹಾಗೂ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅರ್ಚಕರಿಂದ ಆಶೀರ್ವಾದ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಹಾಗೂ ಕ್ರಿಕೆಟ್ ವೃತ್ತಿಜೀವನ ಎರಡೂ ಸಾಕಷ್ಟು ಚರ್ಚೆಯಲ್ಲಿವೆ. ಇದೀಗ ತಿರುಮಲದಲ್ಲಿ ತಲೆ ಬೋಳಿಸಿಕೊಂಡು ದೇವರ ದರ್ಶನ ಪಡೆದಿರುವ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮತ್ತೊಂದೆಡೆ, ಹಾರ್ದಿಕ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರ ತಿರುಮಲ ಭೇಟಿ ಮತ್ತು ಹೊಸ ಲುಕ್ಗೆ ಅಭಿಮಾನಿಗಳು ತಮ್ಮದೇ ಆದ ಅರ್ಥಗಳನ್ನು ನೀಡುತ್ತಿದ್ದಾರೆ.