ಚೆನ್ನೈ : ನೀಟ್ ಮರು ಪರೀಕ್ಷೆಗೆ (NEET Exam) ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮವನ್ನ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಾಜಿ ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ (K Annamalai) ತೀವ್ರವಾಗಿ ಖಂಡಿಸಿದ್ದು, ಮಿಲಿಟರಿ ಭದ್ರತಾ ವ್ಯವಸ್ಥೆಯಿಂದ ಮಕ್ಕಳನ್ನ ಅಪರಾಧಿಗಳಂತೆ ನೋಡುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಮಕ್ಕಳಲ್ಲಿ ತೀವ್ರ ಆತಂಕ ಸೃಷ್ಟಿಯಾಗುತ್ತದೆ, ಮಕ್ಕಳು ಯುದ್ದ ಭೂಮಿಗೆ ಹೋಗುತ್ತಿಲ್ಲ ಎಂದು ತಮ್ಮ ಆತಂಕ ಹೊರಹಾಕಿದ್ದಾರೆ.
ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ ಅಣ್ಣಾಮಲೈ "ಪರೀಕ್ಷೆಯ ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾದರೂ, ಅದು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಯನ್ನು ಕದಡುವಂತಿರಬಾರದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಕಿವಿಮಾತು ಹೇಳಿದ್ದಾರೆ. ಪರೀಕ್ಷಾ ಕೇಂದ್ರಗಳ ಹೊರಗೆ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸುವ ವಿಧಾನವನ್ನು ತೀವ್ರವಾಗಿ ಖಂಡಿಸಿದ ಅಣ್ಣಾಮಲೈ, ಇದು ಹದಿಹರೆಯದ ಯುವಜನರ ಮೇಲೆ ಬೀರುತ್ತಿರುವ ನಕಾರಾತ್ಮಕ ಪ್ರಭಾವವನ್ನು ಎತ್ತಿ ತೋರಿಸಿದರು.
ಮಕ್ಕಳು ಯುದ್ಧಭೂಮಿಗೆ ಹೋಗುತ್ತಿಲ್ಲ
ಇನ್ನು ಪರೀಕ್ಷೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪ್ರಶ್ನೆ ಎತ್ತಿರುವ ಅಣ್ಣಾಮಲೈ “ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಿದ್ದಾರೆಯೇ ಹೊರತು ಯಾವುದೇ ಯುದ್ಧಭೂಮಿಗೆ ಹೋಗುತ್ತಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿರುವ ಮಿಲಿಟರಿ ದರ್ಜೆಯ ಭದ್ರತೆ ಮತ್ತು ಕಠಿಣ ನಿಯಮಗಳು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಉಂಟುಮಾಡುತ್ತಿವೆ. ಶೂ ಬಿಚ್ಚಿಸುವುದು, ಬಟ್ಟೆಗಳ ತಪಾಸಣೆ ಮತ್ತು ಪೋಷಕರನ್ನು ದೂರವಿಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗುತ್ತಿದೆ. ಪ್ರಸ್ತುತ ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವ ಬದಲು ಅವರ ಒತ್ತಡವನ್ನು ತಾಳುವ ಶಕ್ತಿಯನ್ನು ಪರೀಕ್ಷಿಸುತ್ತಿದೆ.” ಎಂದು ಕೆ. ಅಣ್ಣಾಮಲೈ ಹೇಳಿದ್ದಾರೆ.