Search


ಏಷ್ಯನ್‌ ಗೇಮ್ಸ್ ಚಿನ್ನದ ಪದಕ ವಿಜೇತೆ ಪೂವಮ್ಮಗೆ ಹೆಚ್‌ಡಿಕೆ ಸನ್ಮಾನ

ಬೆಂಗಳೂರು: ಏಷ್ಯನ್‌ ಗೇಮ್ಸ್ ರಿಲೆಯಲ್ಲಿ ಚಿನ್ನದ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕನ್ನಡತಿ ಎಂ.ಆರ್. ಪೂವಮ್ಮ ಅವರನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಬೆಂಗಳೂರಿನಲ್ಲಿ ಗೌರವಿಸಿ ಸನ್ಮಾನಿಸಿದರು. ಮಂಗಳೂರಿನಿಂದ ಸಚಿವರ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಪೂವಮ್ಮ ಅವರನ್ನು ಹೆಚ್‌ಎಂಟಿ ಭವನದಲ್ಲಿರುವ ತಮ್ಮ ಕಚೇರಿಗೆ ಬರಮಾಡಿಕೊಂಡ ಕುಮಾರಸ್ವಾಮಿ, ಆತ್ಮೀಯವಾಗಿ ಸತ್ಕರಿಸಿದರು.

ಪೂವಮ್ಮ ಅವರು ತಮ್ಮ ಪತಿ, ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರೊಂದಿಗೆ ಸಚಿವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಪೂವಮ್ಮ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಪರಿಶ್ರಮ ಹಾಗೂ ಯಶಸ್ಸು ಹೊಸ ತಲೆಮಾರಿನ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.

ಪೂವಮ್ಮ ಅವರ ಸಾಧನೆಯನ್ನು ಅವರಿಂದಲೇ ಕೇಳಿ ತಿಳಿದುಕೊಂಡ ಕುಮಾರಸ್ವಾಮಿ, ಅವರ ಯಶಸ್ಸಿನ ಪಯಣ ಮುಂದುವರಿಯಲಿ ಎಂದು ಹಾರೈಸಿದರು. ಕೇಂದ್ರ ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಅಗತ್ಯ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಪೂವಮ್ಮ ಅವರ ತಂದೆ-ತಾಯಿಯ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆಯೂ ಸಚಿವರು ವಿಚಾರಿಸಿದರು.

ನಂತರ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಹಾಗೂ ಪ್ರೋತ್ಸಾಹ ನೀಡುತ್ತಿದೆ ಎಂದರು. ದೇಶದ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅಗತ್ಯವಿರುವ ಮೂಲಸೌಕರ್ಯ ಮತ್ತು ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪೂವಮ್ಮ ಅವರ ಕುಟುಂಬಕ್ಕೆ ಹೆಚ್‌ಎಂಟಿ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡಿ, ನವದೆಹಲಿಯ ತಮ್ಮ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಎಂ.ಆರ್. ಪೂವಮ್ಮ, ಚಿನ್ನದ ಪದಕ ಗೆದ್ದ ಕೂಡಲೇ ತಮ್ಮನ್ನು ಅಭಿನಂದಿಸಿದವರಲ್ಲಿ ಕುಮಾರಸ್ವಾಮಿ ಮೊದಲಿಗರಾಗಿದ್ದರು ಎಂದು ಹೇಳಿದರು. ಅವರಿಂದ ದೊರೆತ ಪ್ರೋತ್ಸಾಹ ಮತ್ತು ಉತ್ತೇಜನಕ್ಕೆ ಧನ್ಯವಾದ ಸಲ್ಲಿಸಿದ ಪೂವಮ್ಮ, ಕೇಂದ್ರ ಸಚಿವರು ಖುದ್ದಾಗಿ ಬರಮಾಡಿಕೊಂಡು ಗೌರವಿಸಿರುವುದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

By Ravikumar - 06-10-2026


Ads in Post