ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲ್ಲೇಶ್ವರಂ, ಬಸವನಗುಡಿ, ಟೌನ್ಹಾಲ್, ಅಂಜನಾಪುರ, ಗೊಟ್ಟಿಗೆರೆ, ಆವಲಹಳ್ಳಿ ಹಾಗೂ ಬನಶಂಕರಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಲ್ಲೇಶ್ವರಂನಲ್ಲಿ ಭಾರಿ ಮಳೆಯಿಂದ ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದು, ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಬೆಳಗಾದರೂ ಮರ ತೆರವು ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಇದೇ ವೇಳೆ, ಮಲ್ಲೇಶ್ವರಂನಲ್ಲಿ ಕ್ಯಾಬ್ ಚಾಲಕ ಹಾಗೂ ಮಾಲೀಕ ವಿನೋದ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ವಿನೋದ್ ಪ್ರತಿದಿನ ರಸ್ತೆ ಬದಿ ಕ್ಯಾಬ್ ನಿಲ್ಲಿಸಿ ಅದರಲ್ಲೇ ಮಲಗುತ್ತಿದ್ದರು. ಸೋಮವಾರ ರಾತ್ರಿ ಕೂಡ ಎಂದಿನಂತೆ ಕ್ಯಾಬ್ ನಿಲ್ಲಿಸಿ ಅದರಲ್ಲೇ ಮಲಗಿದ್ದ ವೇಳೆ ಬೃಹತ್ ಮರ ಉರುಳಿದೆ. ಅದೃಷ್ಟವಶಾತ್ ವಿನೋದ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ವೈಟ್ಫೀಲ್ಡ್ ಮತ್ತು ಮಾರತ್ತಹಳ್ಳಿ ಭಾಗಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಲವು ರಸ್ತೆಗಳು ನೀರಿನಿಂದ ಕೆರೆಯಂತಾಗಿದ್ದು, ಕಸಕಡ್ಡಿಗಳು ಚರಂಡಿ ಹಾಗೂ ನೀರು ಹರಿಯುವ ಮಾರ್ಗಗಳಿಗೆ ಅಡ್ಡಿಯಾಗಿವೆ. ರಸ್ತೆ ಗುಂಡಿಗಳು, ನೀರು ನಿಲ್ಲುವ ಸಮಸ್ಯೆ ಹಾಗೂ ಕಸದ ನಿರ್ವಹಣೆಯಲ್ಲಿನ ಅವ್ಯವಸ್ಥೆ ಮಳೆಯ ಅವಾಂತರವನ್ನು ಮತ್ತಷ್ಟು ಹೆಚ್ಚಿಸಿದೆ.