ಮೈಸೂರು: ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉಪಸ್ಥಿತಿಯಲ್ಲೇ ಡಿಕೆಶಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಕರ್ನಾಟಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಮತ್ತು ಸಹಕಾರ ದೊರೆಯಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸ್ವಾಮಿ ವಿವೇಕಾನಂದರ ವಿಚಾರಗಳು ಹಾಗೂ ಆದರ್ಶಗಳು ಯುವಜನರಿಗೆ ಸ್ಫೂರ್ತಿಯಾಗಬೇಕು. ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯುವಕರಿಗೆ ಹೆಚ್ಚಿನ ಅವಕಾಶ
ರಾಜ್ಯದ ಯುವಜನರನ್ನು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಡಿಕೆಶಿ ಹೇಳಿದರು. ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳ ಮಟ್ಟದಲ್ಲಿ ಯುವಕರನ್ನು ಸಂಘಟಿಸಿ, ಅವರ ಶಕ್ತಿ ಮತ್ತು ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು. ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವುದು ಮತ್ತು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಜನರಿಗೆ ತಲುಪಿಸುವುದು ಮುಖ್ಯ ಎಂದು ಅವರು ಹೇಳಿದರು.
ರಾಮಕೃಷ್ಣ ಆಶ್ರಮ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳಿಗೆ ಕರ್ನಾಟಕ ಸರ್ಕಾರ ಬೆಂಬಲ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ರಾಮಕೃಷ್ಣ ಆಶ್ರಮವನ್ನು ಕೇವಲ ಕರ್ನಾಟಕದ ಆಸ್ತಿಯಾಗಿ ನೋಡದೆ, ದೇಶದ ಆಸ್ತಿಯಾಗಿ ಪರಿಗಣಿಸಬೇಕು. ಇಂತಹ ಸಂಸ್ಥೆಗಳು ಯುವಜನರಲ್ಲಿ ಸೇವಾ ಮನೋಭಾವ ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಮಾತನಾಡಿದ ಡಿ.ಕೆ. ಶಿವಕುಮಾರ್, ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದ ಸಹಕಾರ ಮುಂದುವರಿಯಬೇಕು ಎಂದು ಮನವಿ ಮಾಡಿದರು. “ಕರ್ನಾಟಕವನ್ನು ಬೆಳೆಸೋಣ, ಕರ್ನಾಟಕದ ಜೊತೆ ಭಾರತವೂ ಅಭಿವೃದ್ಧಿಯಾಗಲಿ. ನಮಗೆ ನಿಮ್ಮ ಸಹಕಾರ ಬೇಕು” ಎಂಬ ಸಂದೇಶವನ್ನು ಪ್ರಧಾನಿ ಮೋದಿಗೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ಕೈಮುಗಿದು ವಂದಿಸಿದರು. ಪ್ರಧಾನಿ ಮೋದಿ ಕೂಡ ನಗುಮುಖದಿಂದ ಕೈಮುಗಿದು ಪ್ರತಿಕ್ರಿಯಿಸಿದರು..ಈ ವೇಳೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಇಬ್ಬರು ನಾಯಕರ ನಡುವಿನ ಈ ಕ್ಷಣಕ್ಕೆ ಸಾಕ್ಷಿಯಾದರು.