Search


ಕೈ-ಕಾಲು ಕತ್ತರಿಸಿದರೆ ಮಾತ್ರ ಕಾನೂನಿನ ಮೇಲೆ ಭಯ ಬರುತ್ತೇ : ಹೈಕೋರ್ಟ್‌ ಆಕ್ರೋಶ

ಬೆಂಗಳೂರು: ಜನರಲ್ಲಿ ಕಾನೂನಿನ ಮೇಲಿನ ಭಯ ಕಡಿಮೆಯಾಗುತ್ತಿರು ನಡುವೆ ರಾಜ್ಯ ಹೈಕೋರ್ಟ್‌ ಮಹತ್ವದ ಹೇಳಿಕೆಯನ್ನ ನೀಡಿದೆ, ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ʻಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ನೀವು ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದಾಗ ಮಾತ್ರ ಜನರಿಗೆ ಕಾನೂನನ್ನು ಹೇಗೆ ಪಾಲಿಸಬೇಕು ಎಂಬುದು ಅರಿವಾಗಬಹುದು” ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಗಂಭೀರ ಹೇಳಿಕೆಯನ್ನು ನೀಡಿದೆ.

ಏನಿದು ಪ್ರಕರಣ...!

ಜುಲೈ 2023ರಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಸಹಪಾಠಿಯೊಬ್ಬಳಿಗೆ ತನ್ನ ಪ್ರೀತಿಯನ್ನ ನಿವೇದಿಸಿಕೊಂಡಿದ್ದ, ನಂತರ  ಸೆಪ್ಟೆಂಬರ್ 12, 2023 ರಂದು ಮನವೊಲಿಸುವ ನೆಪದಲ್ಲಿ ಆಕೆಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ಖಿನ್ನತೆಗೆ ಒಳಗಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಪ್ರಕರಣವು ಪೋಲಿಸ್ ಮೆಟ್ಟಿಲೇರಿದ ನಂತರ, ಆರೋಪಿಯು ಮಾರ್ಚ್ 20, 2026 ರಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿ ಮನೆಗೆ ಮರಳಿದ್ದನು. ಆದರೆ, ಏಪ್ರಿಲ್ 4 ರಂದು ಮಹಿಳೆ ಮತ್ತೆ ಅತ್ಯಾಚಾರದ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಮೇ 14 ರಂದು ವಿಚಾರಣಾ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕಾರಣ, ಆತ ಹೈಕೋರ್ಟ್ ಮೆಟ್ಟಿಲೇರಿದ್ದನು.

ಜಾಮೀನಿಗೆ ಅರ್ಜಿ ಸಲ್ಲಿಸಿದ ಅಪರಾಧಿ.. ವಿಚಾರಣೆ ವೇಳೆ ಕೋರ್ಟ್‌ ಗರಂ..!

ಆರೋಪಿಯ ಜಾಮೀನು ಅರ್ಜಿಯನ್ನ ಮೇ.29ರಂದು ನ್ಯಾ.ಆರ್‌ ನಟರಾಜ್‌ ಅವರ ಏಕ ಸದಸ್ಯ ಪೀಠ ಆಲಿಸಿತ್ತು, ಈ ವೇಳೆ "ನಮ್ಮಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಪ್ರತಿಯೊಬ್ಬರೂ ಕಾನೂನನ್ನು ತೀರಾ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ, ನಾವು ಅಪರಾಧಿಗಳನ್ನು ಕಠಿಣವಾಗಿ ನಡೆಸಿಕೊಳ್ಳದ ಕಾರಣ ಕಾನೂನು ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಅದಕ್ಕಾಗಿಯೇ ಇಲ್ಲಿ ಅಪರಾಧ ಮಾಡುವುದು ತುಂಬಾ ಸುಲಭವಾಗಿದೆ. ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಆರೋಪಿ ಪರ ವಕೀಲರು ವಾದ ಮಂಡಿಸಿ, "ನನ್ನ ಕಕ್ಷಿದಾರ ಯಾವುದೇ ತಪ್ಪು ಮಾಡಿಲ್ಲ. ಈಗಾಗಲೇ ಎರಡು ತಿಂಗಳಿನಿಂದ ಜೈಲಿನಲ್ಲಿದ್ದು, ಇದು ಆತನ ವೃತ್ತಿಪರ ಜೀವನಕ್ಕೆ ಧಕ್ಕೆ ತರುತ್ತದೆ" ಎಂದು ಜಾಮೀನಿಗೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, "ಆತ ಇನ್ನು ಕೆಲವು ದಿನಗಳ ಕಾಲ ಜೈಲಿನಲ್ಲೇ ಇರಲಿ… ಒಂದು ವೇಳೆ ವಿಚಾರಣಾ ನ್ಯಾಯಾಲಯವು ಆತನನ್ನು ಅಪರಾಧಿ ಎಂದು ಘೋಷಿಸಿದರೆ, ಆತ ಮತ್ತೆ ಜೈಲಿಗೇ ಹೋಗಬೇಕಾಗುತ್ತದೆ" ಎಂದು ಮೌಖಿಕವಾಗಿ ಹೇಳಿ, ಅರ್ಜಿಯ ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ಮುಂದೂಡಿದೆ. 
 

By Ravikumar - 03-06-2026


Ads in Post