ಬೆಂಗಳೂರು: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ ನೀಡಿ ಕಾರ್ಮಿಕರು, ರೈತರ ಸಮಸ್ಯೆಗಳನ್ನು ಆಲಿಸಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ನಡೆ ಕೆಲವರಿಗೆ ‘ಗಿಮಿಕ್’ ಎನಿಸಬಹುದು, ಆದರೆ ಇದು ಅದ್ಭುತವಾದ ಕೆಲಸ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಎಪಿಎಂಸಿಗೆ ಭೇಟಿ ನೀಡಿದ್ದ ವೇಳೆ ಶಿವಕುಮಾರ್ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಸೇರಿದಂತೆ ಕೃಷಿ ಉತ್ಪನ್ನಗಳ ಗುಣಮಟ್ಟ ಹಾಗೂ ದರ ಪರಿಶೀಲಿಸಿ, ವ್ಯಾಪಾರಿಗಳು ಮತ್ತು ಮಹಿಳಾ ಕಾರ್ಮಿಕರೊಂದಿಗೆ ಕುಳಿತು ಅವರ ಕಷ್ಟಸುಖ ಆಲಿಸಿರುವುದು ಸಂತಸದ ವಿಚಾರ ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ಎಪಿಎಂಸಿ ಮಾರುಕಟ್ಟೆಗಳ ದುಸ್ಥಿತಿ ಹಾಗೂ ಮಳಿಗೆಗಳು ಒಬ್ಬರ ಹೆಸರಿನಲ್ಲಿ ಮತ್ತೊಬ್ಬರ ಬಾಡಿಗೆದಾರರ ವಶದಲ್ಲಿರುವುದರ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ಕಾನೂನು ಪಾಲನೆಯಲ್ಲಿ ಯಾವುದೇ ತಾಂತ್ರಿಕ ಅಡಚಣೆಗಳು ಎದುರಾಗಬಾರದು ಎಂದು ನ್ಯಾಯಪೀಠ ತಿಳಿಸಿದೆ. ಕಾರ್ಮಿಕರನ್ನು ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಮುಕ್ತಗೊಳಿಸುವ ಅಗತ್ಯವಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದಕ್ಕೂ ಮುನ್ನ ಎಪಿಎಂಸಿ ಭೇಟಿಯ ವೇಳೆ ಬಾಲಕಾರ್ಮಿಕ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಡಿಕೆ ಶಿವಕುಮಾರ್ ಸೂಚಿಸಿದ್ದರು. ಮಕ್ಕಳನ್ನು ಕೆಲಸಕ್ಕೆ ಬಳಸುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದರು. ರಾಜ್ಯದ ಇತರೆ ಎಪಿಎಂಸಿಗಳಿಗೂ ಸಚಿವರು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವಂತೆ ಸೂಚಿಸಲಾಗುವುದು ಎಂದ ಅವರು, ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ಬರುತ್ತಿದ್ದು, ಅವುಗಳ ಗುಣಮಟ್ಟ ಹಾಗೂ ಸಂಗ್ರಹಣಾ ಅವಧಿಯಲ್ಲಿ ವ್ಯತ್ಯಾಸವಿದೆ ಎಂದು ತಿಳಿಸಿದ್ದರು.