Search


ಆರ್‌ ಜಿ ಕರ್‌ ಅತ್ಯಾಚಾರ ಪ್ರಕರಣದ ಮರುತನಿಖೆಗೆ ಹೈಕೋರ್ಟ್‌ ಆದೇಶ

ಕೊಲ್ಕತ್ತಾ : ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಆರ್‌,ಜಿ ಕರ್‌ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಕೊಲ್ಕತ್ತಾ ಹೈಕೋರ್ಟ್‌ ಪ್ರಕರಣದ ಮರುತನಿಖೆಯಾಗಿ ಸಿಬಿಐಗೆ ಆದೇಶಿಸಿದ್ದು. ಜೂನ್‌ 25ರ ಒಳಗೆ ವರದಿ ಸಲ್ಲಿಸುವಂತೆ ಮಹತ್ವದ ಆದೇಶ ನೀಡಿದೆ.

ಸಾಕ್ಷನಾಶದ ಆರೋಪ.. ಮರುತನಿಖೆಗೆ ಆದೇಶ...!

2024ರ ಆಗಸ್ಟ್‌ 9ರಂದು ಕೊಲ್ಕತ್ತಾದ ಆರ್‌,ಜಿ ಕರ್‌ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಇಡೀ ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಭೀಕರ ಘಟನೆಯ ನಂತರ ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಲು ದೊಡ್ಡ ಮಟ್ಟದ ಸಂಚು ನಡೆದಿದೆ ಎಂದು ಮೃತ ಯುವ ವೈದ್ಯೆಯ ಪೋಷಕರು 2025ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅಪರಾಧದ ಸ್ವರೂಪ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಪರಿಗಣಿಸಿ ಈ ಮರುತನಿಖೆಯ ಆದೇಶ ನೀಡಿದೆ.

ಜಂಟಿ ನಿರ್ದೇಶಕರ (ಪೂರ್ವ ವಲಯ) ನೇತೃತ್ವದಲ್ಲಿ ಮೂರು ಸದಸ್ಯರ ಹೊಸ ಸಿಬಿಐ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ನ್ಯಾಯಮೂರ್ತಿಗಳಾದ ಶಂಪಾ ಸರ್ಕಾರ್ ಮತ್ತು ತೀರ್ಥಂಕರ್ ಘೋಷ್ ಅವರಿದ್ದ ವಿಭಾಗೀಯ ಪೀಠವು ಆದೇಶಿಸಿದೆ. ಈ ತಂಡವು ತನಿಖೆ ನಡೆಸಿ ಜೂನ್ 24 ಅಥವಾ 25ರ ಒಳಗಾಗಿ ನ್ಯಾಯಾಲಯಕ್ಕೆ ವಿವರವಾದ ವರದಿಯನ್ನು ಸಲ್ಲಿಸಬೇಕಿದೆ.

ಘಟನೆಗಳ ಮರುಪರಿಶೀಲನೆಗೆ ಸೂಚನೆ...!

2024ರ ಆಗಸ್ಟ್ 9ರಂದು ಸಂತ್ರಸ್ತೆ ಇತರ ಜೂನಿಯರ್ ವೈದ್ಯರೊಂದಿಗೆ ರಾತ್ರಿ ಊಟ ಮಾಡಿದ ಸಮಯದಿಂದ ಹಿಡಿದು, ಆಸ್ಪತ್ರೆಯ ತುರ್ತು ನಿಗಾ ವಿಭಾಗದ ಮೂರನೇ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ ಆಕೆಯ ಶವ ಪತ್ತೆಯಾದ ಮತ್ತು ಮರುದಿನ ಅತ್ಯಂತ ಆತುರವಾಗಿ ಶವಸಂಸ್ಕಾರ ನಡೆದವರೆಗಿನ ಎಲ್ಲಾ ಘಟನೆಗಳ ಸರಣಿಯನ್ನು ಮತ್ತೊಮ್ಮೆ ತನಿಖೆ ಮಾಡಲು ಎಸ್‌ಐಟಿಗೆ ಹೈಕೋರ್ಟ್ ಸೂಚಿಸಿದೆ.

ಈ ನ್ಯಾಯಾಲಯದ ಆದೇಶ ಬರುವ ಕೆಲವೇ ದಿನಗಳ ಮುನ್ನ ಅಂದರೆ ಮೇ 15ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಾಜಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮತ್ತು ಇಬ್ಬರು ಉಪ ಪೊಲೀಸ್ ಕಮಿಷನರ್‌ಗಳಾದ ಇಂದಿರಾ ಮುಖರ್ಜಿ ಹಾಗೂ ಅಭಿಷೇಕ್ ಗುಪ್ತಾ ಅವರನ್ನು ಅಮಾನತುಗೊಳಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಮತ್ತು ಸಂತ್ರಸ್ತೆಯ ಪೋಷಕರಿಗೆ ಹಣದ ಆಮಿಷ ಒಡ್ಡಿದ ಆರೋಪ ಇವರ ಮೇಲಿದೆ.

ಆರ್‌ಜಿ ಕರ್ ಆಸ್ಪತ್ರೆಯ ಘಟನೆಯು ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಪ್ರಮುಖ ಚರ್ಚಾ ವಿಷಯವಾಗಿತ್ತು. ಮೃತ ವೈದ್ಯೆಯ ತಾಯಿ ರತ್ನಾ ದೇವನಾಥ್ ಅವರು ಬಿಜೆಪಿಯಿಂದ ಪಾನಿಹಟಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಟಿಎಂಸಿ (TMC) ಸರ್ಕಾರದ ಹಿರಿಯ ನಾಯಕರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂದು ಅವರು ಆರೋಪಿಸಿದ್ದರು.
 

By thebigbulletin.com - 22-05-2026


Ads in Post