ಬೆಂಗಳೂರು : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar), ನಾಳೆ ಸಂಜೆ 4;05 ನಿಮಿಷಕ್ಕೆ, ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ. ಈ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸರ್ವ ಧರ್ಮಗಳ ಪ್ರಮುಖ ಧರ್ಮ ಗುರುಗಳಿಗೆ ಆಹ್ವಾನ ನೀಡಲಾಗಿದ್ದು. ಇವರಲ್ಲರ ಮುಂದೆ ಡಿಕೆ ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.
ಈವರೆಗೂ ರಾಜ್ಯದಲ್ಲಿ ಸರ್ವಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಉದಾಹರಣೆಗಳಿಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಅವರೇ ಮೊದಲ ಬಾರಿಗೆ ಎಲ್ಲಾ ಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಈಗಾಗಲೇ ಎಲ್ಲಾ ಧರ್ಮ, ಜಾತಿಗಳ ಸುಮಾರು 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲು ಸೂಚನೆ ನೀಡಲಾಗಿದೆ. ಈ ಮೂಲಕ ಸರ್ವ ಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ, ಶಾಂತಿ ಸೌಹಾರ್ದತೆಯ ಸಂದೇಶ ಸಾರಲು ಮುಂದಾಗಿದ್ದಾರೆ.
ಹಿಂದೂ ಸ್ವಾಮೀಜಿಗಳು, ಮುಸ್ಲಿಂ ಮೌಲ್ವಿಗಳು, ಕ್ರಿಶ್ಚಿಯನ್ ಫಾದರ್ಗಳಿಗೆ ಆಹ್ವಾನ...!
ಸರ್ವ ಧರ್ಮ, ಸರ್ವ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, 55 ಸ್ವಾಮೀಜಿಗಳು, ಫಾದರ್ , ಮಠಾಧಿಪತಿಗಳು ಹಾಗೂ ಮೌಲ್ವಿಗಳಿಗೆ ಸರ್ಕಾರದಿಂದಲೇ ಅಧಿಕೃತ ಆಹ್ವಾನ ಕಳಿಸಲು ಡಿಕೆ ಶಿವಕುಮಾರ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಯಾರಿಗೆಲ್ಲಾ ಆಹ್ವಾನ ನೀಡಬೇಕೆಂದು ಶಿಷ್ಟಾಚಾರ ವಿಭಾಗವು ಡಿ.ಕೆ ಶಿವಕುಮಾರ್ ಕಚೇರಿಯಿಂದ ಪಟ್ಟಿ ಪಡೆದುಕೊಂಡಿದೆ.
ಇನ್ನು ಪೂರ್ವಾಭಿಮುಖವಾಗಿ ನಿಂತು ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಲೋಕಭವನದ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯಲ್ಲಿ 1100 ರಷ್ಟು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿಗಳು, ಧರ್ಮಗುರುಗಳು, ನ್ಯಾಯಾಧೀಶರು, ವಿಶೇಷ ಆಹ್ವಾನಿತರು, ಬೇರೆ ರಾಜ್ಯಗಳ ಸಿಎಂಗಳಿಗೆ ಸೇರಿದಂತೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.