ಕೋಲ್ಕತ್ತಾ : ಗೋಹತ್ಯೆ ನಿಷೇಧಿಸಿದಕ್ಕೆ ಹಿಂದೂಗಳು ವಿರೋಧಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪದಗ್ರಹಣ ಮಾಡಿದ ಕ್ಷಣದಿಂದಲೇ ರಾಜ್ಯದಲ್ಲಿ ಜಾನುವಾರು ವಧೆ ನಿಷೇಧವನ್ನ ಜಾರಿಗೆ ತಂದಿದ್ದರು. ಇದಕ್ಕೆ ಮುಸ್ಲಿಂ ಸಂಘಟನೆಗಳು ಒಪ್ಪಿಗೆ ಸೂಚಿಸಿದರು ಕೂಡ ಆದರೆ ಅಚ್ಚರಿ ಎಂಬಂತೆ ಹಿಂದೂ ವ್ಯಾಪಾರಿಗಳು ಮತ್ತು ರೈತರು ಈ ನಿಷೇಧವನ್ನ ವಿರೋಧಿಸುತ್ತಿದ್ದಾರೆ.
ಬಿಜೆಪಿ ಮುಖ್ಯ ಅಜೆಂಡಾಗಳಲ್ಲಿ ಗೋಹತ್ಯೆ ನಿಷೇಧವು ಕೂಡ ಒಂದು. ಯಾವ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೋ ಅಲ್ಲಿ ಗೋಹತ್ಯೆಯನ್ನ ನಿಷೇಧಿಸಿ ಕಾನೂನು ಜಾರಿಗೊಳಿಸುತ್ತಾರೆ, ಆದರೆ ಕಟ್ಟರ್ ಹಿಂದುತ್ವವಾದವನ್ನ ಅನುಸರಿಸಿಕೊಂಡು ಬಂದು ಗದ್ದುಗೆ ಹಿಡಿದಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಈ ಕಾನೂನಿಗೆ ಹಿಂದುಗಳೆ ವಿರೋಧಿಸುತ್ತಿದ್ದಾರೆ, ಇದಕ್ಕೆ ಕಾರಣ ಇಲ್ಲಿದೆ.
ಮೇ 13ರಂದು ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಯಾವುದೇ ಎತ್ತು, ಹಸು ಅಥವಾ ಎಮ್ಮೆಯನ್ನು ವಧೆ ಮಾಡಬೇಕಾದರೆ, ಅದು ವಧೆಗೆ ಸೂಕ್ತವಾಗಿದೆ ಎಂದು ಪಶುವೈದ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಆದರೆ ಹಬ್ಬದ ಸಂದರ್ಭದಲ್ಲಿ ಈ ನಿಯಮ ಸಡಿಲಿಸುವಂತೆ ಕೋರಿ ಕೆಲವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಈ ಅರ್ಜಿಯನ್ನ ತಿರಸ್ಕರಿಸಿತ್ತು.
ವ್ಯಾಪಾರಿಗಳು ಮತ್ತು ರೈತರ ಆಕ್ಷೇಪಕ್ಕೆ ಅಸಲಿ ಕಾರಣವೇನು?
ಈ ಕಾಯ್ದೆಯು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಜನರ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಬಂಗಾಳದಾದ್ಯಂತ ಇರುವ ಜಾನುವಾರು ಮಾರುಕಟ್ಟೆಗಳು ಈಗ ಸಂಪೂರ್ಣವಾಗಿ ಕಳೆಗುಂದಿವೆ. ಹಬ್ಬದ ಸಮಯದಲ್ಲಿ ಹಸು ಹಾಗೂ ಎಮ್ಮೆಗಳನ್ನು ಮಾರಾಟ ಮಾಡಿ ವರ್ಷದ ಬಹುದೊಡ್ಡ ಆದಾಯ ಗಳಿಸುತ್ತಿದ್ದ ಹೈನುಗಾರರು ಮತ್ತು ವ್ಯಾಪಾರಿಗಳಿಗೆ ಈ ಹೊಸ ನಿಯಮ ತೀವ್ರ ನಿರಾಶೆ ಮೂಡಿಸಿದೆ.
ಹೀಗಾಗಿ, ಗ್ರಾಮೀಣ ಭಾಗದಲ್ಲಿ ವಯಸ್ಸಾದ ಜಾನುವಾರುಗಳನ್ನು ಸಾಕುವುದು ಹೊರೆಯಾಗುವುದರಿಂದ ಮತ್ತು ಹಬ್ಬದ ವ್ಯಾಪಾರಕ್ಕೆ ಕುತ್ತು ಬಂದಿರುವುದರಿಂದ ಸ್ಥಳೀಯ ರೈತರು ಮತ್ತು ವ್ಯಾಪಾರಿ ವಲಯದಿಂದ ಈ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜಾನುವಾರುಗಳ ವಧೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1950 ರ ಕಾನೂನು ಮತ್ತು 2018 ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
ಹೊಸ ನಿಯಮದ ಪ್ರಕಾರ, ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅಷ್ಟೇ ಅಲ್ಲದೆ, ಎತ್ತು, ಹೋರಿ, ಹಸು, ಕರು ಮತ್ತು ಎಮ್ಮೆಗಳನ್ನು ವಧೆ ಮಾಡಬೇಕಾದರೆ ಅವು ವಧೆಗೆ ಯೋಗ್ಯವಾಗಿವೆ ಎಂದು ಪಶುವೈದ್ಯರು ಹಾಗೂ ಪುರಸಭೆಯ ಅಧ್ಯಕ್ಷರು ಅಥವಾ ಪಂಚಾಯತ್ ಮುಖ್ಯಸ್ಥರು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯಗೊಳಿಸಲಾಗಿದೆ. ಈ ರೀತಿ ಪ್ರಮಾಣೀಕರಿಸಿದ ಪ್ರಾಣಿಗಳನ್ನು ಸಹ ಕೇವಲ ಸರ್ಕಾರ ಅನುಮೋದಿಸಿದ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶ ನೀಡಲಾಗಿದೆ.